ದ.ಕ: 7 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ನೇರ, ಇನ್ನೊಂದು ತ್ರಿಕೋನ ಸ್ಪರ್ಧೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಗೆ ವೇದಿಕೆ ನಿರ್ಮಾಣವಾಗಿದೆ.
ಮೂಡುಬಿದಿರೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಉಳಿದಂತೆ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯಗಳಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ. ಕಾಂಗ್ರೆಸ್ನಿಂದ ಶಾಸಕರಾದ ಅಭಯಚಂದ್ರ ಜೈನ್(ಮೂಡುಬಿದಿರೆ), ಯು.ಟಿ.ಖಾದರ್(ಮಂಗಳೂರು), ರಮಾನಾಥ ರೈ(ಬಂಟ್ವಾಳ) ಹಾಗೂ ವಸಂತ ಬಂಗೇರ(ಬೆಳ್ತಂಗಡಿ) ಮತ್ತೆ ಅದೃಷ್ಟ ಪರೀಕ್ಷಿಸಲಿದ್ದಾರೆ. ಬಿಜೆಪಿಯಿಂದ ಕೃಷ್ಣಪಾಲೇಮಾರ್(ಮಂಗಳೂರು ಉತ್ತರ), ಯೋಗೀಶ್ ಭಟ್(ಮಂಗಳೂರು ದಕ್ಷಿಣ), ಅಂಗಾರ(ಸುಳ್ಯ)ಮರು ಆಯ್ಕೆ ಬಯಸಿದ್ದಾರೆ.
ಕಾಂಗ್ರೆಸ್ನಲ್ಲಿ ಮಂಗಳೂರು ಉತ್ತರದಲ್ಲಿ ಮೈದಿನ್ ಬಾವಾ, ದಕ್ಷಿಣದಲ್ಲಿ ಜೆ.ಆರ್.ಲೋಬೋ, ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ, ಸುಳ್ಯದಲ್ಲಿ ರಘು ಕಣಕ್ಕಿಳಿದಿದ್ದಾರೆ. ಬಿಜೆಪಿಯಲ್ಲಿ ಮಂಗಳೂರಿನಲ್ಲಿ ಚಂದ್ರಹಾಸ ಉಳ್ಳಾಲ, ಬಂಟ್ವಾಳದಲ್ಲಿ ರಾಜೇಶ್ ನೈಕ್, ಬೆಳ್ತಂಗಡಿಯಲ್ಲಿ ರಂಜನ್, ಪುತ್ತೂರಿನಲ್ಲಿ ಸಂಜೀವ ಮಠಂದೂರು ಸ್ಪರ್ಧೆಯಲ್ಲಿದ್ದಾರೆ. ಜೆಡಿಎಸ್ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೂ ಮೂಡುಬಿದಿರೆಯಲ್ಲಿ ಅಮರನಾಥ ಶೆಟ್ಟಿ ಮತ್ತೆ ಕಣಕ್ಕಿಳಿದಿರುವುದರಿಂದ ಇಲ್ಲಿ ತ್ರಿಕೋನ ಸ್ಪರ್ಧೆ ಎದುರಾಗಿದೆ. ಕೆಜೆಪಿ ಈ ಬಾರಿ ಹೊಸ ಎದುರಾಳಿ.
--
ಚುನಾವಣಾ ಪ್ರಕ್ರಿಯೆಗೆ ತಾಂತ್ರಿಕ ನೆರವು: ಜಿಲ್ಲಾಧಿಕಾರಿ ಹರ್ಷ ಗುಪ್ತ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ವ್ಯವಸ್ಥಿತ ಚುನಾವಣೆ ನಡೆಸಲು ಹಾಗೂ ಜಿಲ್ಲೆಯಿಂದ ರಾಜ್ಯಕ್ಕೊಂದು ಪೈಲಟ್ ಮಾದರಿ ನೀಡುವ ನಿಟ್ಟಿನಲ್ಲಿ ಚುನಾವಣಾ ಪ್ರಕ್ರಿಯೆಗೆ ತಾಂತ್ರಿಕತೆ ನೆರವಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ.
ಭಾನುವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅವರು ಜಿಲ್ಲೆಗೆ ಆಗಮಿಸಿರುವ ಎಲ್ಲ ಚುನಾವಣಾ ವೀಕ್ಷಕರು ಮತ್ತು ಚುನಾವಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸ್ಮಾರ್ಟ್ಫೋನ್, ವಾಕಿಟಾಕಿ, ಕಂಟ್ರೋಲ್ ರೂಂ ಹಾಗೂ ಎಂಸಿಎಂಸಿ ಸಮಿತಿಯನ್ನು ರಚಿಸಲಾಗಿದ್ದು, ಏಕಗವಾಕ್ಷಿ ಯೋಜನೆ ರೂಪಿಸಲಾಗಿದೆ. ಆಯೋಗದ ನಿರ್ದೇಶನದಂತೆ ಹಲವು ಸುತ್ತೋಲೆಗಳನ್ನು ಜಿಲ್ಲಾ ಚುನಾವಣಾಧಿಕಾರಿ ಹೊರಡಿಸಿದ್ದು, ಆಡಿಯೋ ಕಾನ್ಫರೆನ್ಸ್, ಆರ್ಒಗಳ ವಿಶೇಷ ಸಭೆ ನಡೆಸಿ ಕಾಲಕಾಲಕ್ಕೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಎಲ್ಲರೂ ಚುನಾವಣಾ ಕರ್ತವ್ಯದಲ್ಲಿ ನಿರತ ಸಂದರ್ಭ ಪರಸ್ಪರ ತೊಂದರೆಯಾಗದಂತೆ ಮಾಹಿತಿ ಸಂಗ್ರಹಿಸಲು ಢಿಢಿಢಿ.ಜ್ಞ.ಟ್ಝ್ಛಿ.್ಝಟಿ ವೆಬ್ಸೈಟ್ ಸಂಪರ್ಕಿಸಿ ಎಲ್ಲ ಮಾಹಿತಿ ಒಂದೆಡೆ ಪಡೆಯಬಹುದು ಎಂದರು.
ಸಭೆಯಲ್ಲಿ ವೀಕ್ಷಕರಾದ ಪುಷ್ಪವತಿ ಸಕ್ಸೇನಾ, ರಾಮಕುಮಾರ್, ದಿನೇಶ್ ಗೋಯಲ್, ಜಗದೀಶ್ ಪಾಟೀಲ್, ಮುಖೇಶ್ ಕುಮಾರ್, ಆರ್ಸಿ ವರ್ಮಾ ಹಾಜರಿದ್ದರು.
---