ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಕ್ಸಲ್ ಪ್ಯಾಕೇಜ್: ಅನುಷ್ಠಾನ ಶೇ.3 ಮಾತ್ರ!

Lingaraj Badiger
Updated On : 22 Apr 2013, 12:29 pm

- ಆತ್ಮಭೂಷಣ್
ಮಂಗಳೂರು:
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಧಿಕಾರಿಗಳಿಗೆ ನಕ್ಸಲ್ ಬಾಧಿತ ಪ್ರದೇಶ ನೆನಪಾಗಿದೆ. ಮುಖ್ಯವಾಗಿ ದಕ್ಷಿಣ ಕನ್ನಡದಲ್ಲಿ ಮಲೆಕುಡಿಯ ಜನಾಂಗದವರು ವಾಸವಿರುವ ನಕ್ಸಲ್ ಬಾಧಿತ ಪ್ರದೇಶದ ಸಂತ್ರಸ್ತರಿಗೆ ಪುನರ್ವಸತಿ ಸಾಧ್ಯವಾಗಿಲ್ಲ. ಕಾಡು-ನಾಡು ಮಧ್ಯೆ ಅತಂತ್ರ ಸ್ಥಿತಿಯಲ್ಲಿ ಸಂತ್ರಸ್ತರು ಬದುಕು ಸವೆಸುತ್ತಿದ್ದಾರೆ.
ಈ ಮಧ್ಯೆ ಈ ಪ್ರದೇಶಗಳಲ್ಲಿ ಮತದಾನಕ್ಕೆ ಪ್ರೇರೇಪಿಸಲು ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಇಷ್ಟಾದರೂ ಈ ವರೆಗೆ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಮಂಜೂರಾದ ಮೊತ್ತದಲ್ಲಿ ಕಾಮಗಾರಿ ನಡೆದದ್ದು ಶೇ.3 ಮಾತ್ರ.
ಅರ್ಜಿ ಹಾಕಿದರೂ ಪರಿಹಾರ ಸಿಕ್ಕಿಲ್ಲ: ನಕ್ಸಲ್ ಬಾಧಿತ ಪ್ರದೇಶದಲ್ಲಿ ವಾಸವಿದ್ದ 200 ಕುಟುಂಬಗಳು ನಾಡಿನಲ್ಲಿ ಪುನರ್ವಸತಿಗೆ ಅರ್ಜಿ ಸಲ್ಲಿಸಿದ್ದವು. ಇದರಲ್ಲಿ 31 ಕುಟುಂಬಕ್ಕೆ ತಲಾ ರು. 10 ಲಕ್ಷದಂತೆ ಪರಿಹಾರ ಸಿಕ್ಕಿದೆ. 141 ಅರ್ಜಿ ಇನ್ನೂ ವಿಲೇವಾರಿ ಆಗಿಲ್ಲ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ 130 ಕುಟುಂಬ ವಾಸವಿದೆ. 30 ಕುಟುಂಬ ಕಾಡಿನಿಂದ ಹೊರಗೆ ಬಂದಿದೆ. ಇಲ್ಲಿ 120 ಕುಟುಂಬ ಮಲೆಕುಡಿಯರದ್ದು, 112 ಇತರೆ ಕುಟುಂಬ. ಇವರು ಪಂಚಾಯ್ತಿಗೆ ತೆರಿಗೆ ಪಾವತಿಸುತ್ತಾರೆ, ವಿವಿಧ ಇಲಾಖಾ ಸವಲತ್ತು ಪಡೆಯುತ್ತಾರೆ, ಮತದಾನ ಹಕ್ಕು ಹೊಂದಿದ್ದಾರೆ.
ಕಾಡು ಬಿಡುವವರಿಗೆ ಸೌಲಭ್ಯ!: ಕಾಡಿನಿಂದ ನಾಡಿಗೆ ಬರುವ ನಕ್ಸಲ್ ಪ್ರದೇಶ ಸಂತ್ರಸ್ತರ ಪುನರ್ವಸತಿಗೆ 2 ವರ್ಷ ಹಿಂದೆ ರು. 5 ಕೋಟಿ ಮಂಜೂರಾಗಿದೆ. ಇದರ ಸದ್ಬಳಕೆ ಸರಿಯಾಗಿ ಆಗಿಲ್ಲ ಎನ್ನುವುದೇ ಸಂತ್ರಸ್ತರ ಕೊರಗು. 5 ವರ್ಷದ ಹಿಂದೆಯೂ ಸಂತ್ರಸ್ತರ ಪುನರ್ವಸತಿಗೆ ಹಣ ಬಿಡುಗಡೆಯಾಗಿತ್ತು. ಆದರೆ ಕಾಮಗಾರಿಗೆ ಯಾರೂ ಅಧಿಕಾರಿಗಳು ಮನಸ್ಸು ಮಾಡಿರಲಿಲ್ಲ.  
ಬೆಳ್ತಂಗಡಿ ತಾಲೂಕಿನ 9 ಗ್ರಾಮ ಪಂಚಾಯ್ತಿಯ 12 ಗ್ರಾಮಗಳು ನಕ್ಸಲ್ ಬಾಧಿತ ವ್ಯಾಪ್ತಿಗೆ ಒಳಪಡುತ್ತವೆ. ಇಲ್ಲಿ ನಕ್ಸಲ್ ಪ್ಯಾಕೇಜ್ ಮೊತ್ತದಲ್ಲಿ ಕಾಮಗಾರಿ ಕೈಗೊಂಡರೂ ವೈಜ್ಞಾನಿಕವಾಗಿ ಅದನ್ನು ನಿರ್ಧರಿಸಿಲ್ಲ. ಅಲ್ಲದೆ ಕೈಗೊಂಡ ಕಾಮಗಾರಿ ತೀರ ಕಳಪೆ. 19 ಕಾಮಗಾರಿಗೆ ರು. 229.49 ಲಕ್ಷ ವ್ಯಯಿಸಬೇಕಿತ್ತು. ಅದರಲ್ಲಿ ಕುತ್ಲೂರಿನಲ್ಲಿ 2 ಸಿಮೆಂಟ್ ದಂಡೆ ನಿರ್ಮಿಸಿ ಮಧ್ಯೆ ಮೋರಿ ಹಾಕಲಾಗಿದೆ. ಈಗ ದಂಡೆ ಕಿತ್ತುಹೋಗುತ್ತಿದೆ. ಇದೇ ರೀತಿ ಕಾಮಗಾರಿ ಐದಾರು ಕಡೆ ಆಗಿದೆ. ಈ ಕಾಮಗಾರಿಗೆ ರು. 40 ಲಕ್ಷ ವೆಚ್ಚ ತೋರಿಸಲಾಗಿದೆ. ಇಂದಬೆಟ್ಟಿನಲ್ಲಿ ನೆಹರೂ ಸೇತುವೆ ನಿರ್ಮಿಸಲು ರು. 40 ಲಕ್ಷ ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಆದರೆ ಕಾಮಗಾರಿ ಶುರುವಿಗೆ ಹೊಳೆಯಲ್ಲಿ ನೀರು ಅಡ್ಡಿಯುಂಟು ಮಾಡಿದೆ. ಇದು ದೂರದೃಷ್ಟಿ ಇಲ್ಲದೆ ಕಾಮಗಾರಿಗೆ ಅಧಿಕಾರಿಗಳು ಒಪ್ಪಿಗೆ ನೀಡಿರುವುದಕ್ಕೆ ನಿದರ್ಶನ.
ಬೆಳ್ತಂಗಡಿಯಲ್ಲಿ ನಕ್ಸಲ್ ಬಾಧಿತ ಪ್ರದೇಶದ ಸಂತ್ರಸ್ತ ಪುನರ್ವಸತಿಗೆ 109 ಎಕರೆ ಜಿಲ್ಲಾಡಳಿತ ಕಾದಿರಿಸಿ 3 ವರ್ಷ ಕಳೆದಿದೆ. ನಿರ್ದಿಷ್ಟ ಪ್ಯಾಕೇಜ್ ಬಂದಿಲ್ಲ ಎಂಬ ಕಾರಣಕ್ಕೆ ಇಲ್ಲಿ ನಿವೇಶನ ಗುರುತಿಸಿಲ್ಲ.  
ನಕ್ಸಲ್ ಪ್ರವೇಶಕ್ಕೆ ಆಸ್ಪದ?: ಒಂದೆಡೆಯಿಂದ ಕಾಡು ಬಿಟ್ಟು ನಾಡಿಗೆ ಬನ್ನಿ ಎನ್ನುತ್ತಿದ್ದಾರೆ, ಇನ್ನೊಂದೆಡೆ ಕಾಡಿನಲ್ಲೇ ಮೂಲಸೌಕರ್ಯಕ್ಕೆ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದಾರೆ. ಜತೆಯಲ್ಲಿ ಕಾಮಗಾರಿಯನ್ನೂ ಸರಿಯಾಗಿ ಮಾಡುತ್ತಿಲ್ಲ. ಇದನ್ನೇ ನೆಪವಾಗಿಟ್ಟು ಈಚೆಗೆ ಶೃಂಗೇರಿಯ ಕಿಗ್ಗದಲ್ಲಿ ಕಾಣಿಸಿದ ನಕ್ಸಲ್ ಕರಪತ್ರದಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ನಕ್ಸಲ್ ಪ್ರದೇಶದಲ್ಲಿ ಮೂಲಸೌಕರ್ಯ ಹೆಚ್ಚಿಸಿದರೆ ಪ್ರಯೋಜನವಿಲ್ಲ. ಯಾಕೆಂದರೆ ಅದರ ಪ್ರಯೋಜನವನ್ನು ನಕ್ಸಲರೇ ಪಡೆಯುತ್ತಾರೆ ಎಂದು ಪೊಲೀಸ್ ಗುಪ್ತ ಸಭೆಯಲ್ಲಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದರಂತೆ.
'ಮತಹಾಕಿ ಸೌಲಭ್ಯ ಕೇಳ್ತೇವೆ...': 'ನಾವು ಮತದಾನ ಮಾಡುತ್ತೇವೆ. ಮತ ಹಾಕಿ ಸೌಲಭ್ಯ ಕೇಳುತ್ತವೆ' ಎನ್ನುತ್ತಾರೆ ನಾಯ್ದಗುರಿ ನಿವಾಸಿ ಸಂಜೀವ ಮಲೆಕುಡಿಯ.
ಅಧಿಕಾರಿಗಳು ಎಲ್ಲರೂ ಮತದಾನ ಮಾಡುವಂತೆ ಪ್ರೇರೇಪಿಸಿದ್ದಾರೆ. ಕಾಡು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಿದ್ದಾರೆ. ನಮ್ಮಲ್ಲಿ 18 ಮಲೆಕುಡಿಯ ಕುಟುಂಬ ಇದೆ. ನಾವೆಲ್ಲರೂ ಮತದಾನ ಮಾಡುತ್ತೇವೆ, ಅದು ನಮ್ಮ ಹಕ್ಕು ಎನ್ನುತ್ತಾರೆ ಅವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement