ವಿವಾಹಿತೆ ಪ್ರಿಯಕರನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ
ಬಂಟ್ವಾಳ: ಮಗಳ ಜೊತೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಮೈಸೂರಿನಲ್ಲಿ ಪ್ರಿಯಕರನ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಮಹಿಳೆ ಮೃತಪಟ್ಟು, ಪ್ರಿಯಕರನ ಸ್ಥಿತಿ ಗಂಭೀರವಾಗಿದೆ.
ಕರಿಯಂಗಳ ನಿವಾಸಿ ಬಾಬು ಪೂಜಾರಿ ಎಂಬವರ ಪತ್ನಿ ಮೋಹಿನಿ (35) ಮೃತರು.ಪ್ರಿಯಕರ ನರೇಂದ್ರ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೀಗ ಅನಾಥಳಾಗಿದ್ದ ಮೋಹಿನಿ ಮಗಳು ಮನಿಷ (9)ಳನ್ನು ಮೈಸೂರು ದೇವರಾಜ ಪೊಲೀಸರು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳ ಮೂಲದ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರು ಪದವು ನಿವಾಸಿಯಾಗಿದ್ದ ಮೋಹಿನಿ, ಕಳೆದ ಮೂರು ವಾರಗಳ ಹಿಂದೆ ಕೈಕಂಬದ ಬೀಡಿ ಕಾರ್ಮಿಕರ ಕಚೇರಿಗೆ ಹೋಗಿ ಅಲ್ಲಿಂದ ತಲೆನೋವಿಗೆ ಔಷಧಿ ತೆಗೆದುಕೊಂಡು ಬರುತ್ತೇನೆ ಎಂದು ತನ್ನ ಮಗಳು ಮನೀಷಾಳೊಂದಿಗೆ ತೆರಳಿ, ವಾಪಸ್ ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಬಾಬು ಪೂಜಾರಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ತನ್ನ ಪತ್ನಿಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನರೇಂದ್ರ ಎಂಬವನ ಪರಿಚಯವಿದ್ದು, ಆತನೊಂದಿಗೆ ತೆರಳಿರಬೇಕೆಂದು ದೂರಿನಲ್ಲಿ ತಿಳಿಸಿದ್ದರು. ಶನಿವಾರ ರಾತ್ರಿ ಮೈಸೂರಿನ ಸುದರ್ಶನ್ ಲಾಡ್ಜ್ನಲ್ಲಿ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮೋಹಿನಿ ಸ್ಥಳದಲ್ಲಿಯೇ ಮೃತಪಟ್ಟರೆ, ನರೇಂದ್ರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಇಬ್ಬರ ನಡುವೆ ಪ್ರೇಮವಿದ್ದು, ಅವರಿಬ್ಬರೂ ಕಳೆದ ಏ.9ರಂದು ಮೈಸೂರಿಗೆ ತೆರಳಿದ್ದರು. ಆರ್ಥಿಕ ಅಡಚಣೆ ತೀವ್ರವಾದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ನರೇಂದ್ರ ಮಂಗಳೂರು ಪಿಲಿಕುಲ ನಿವಾಸಿ ಎಂದು ಲಾಡ್ಜ್ನಲ್ಲಿ ಹೆಸರು ದಾಖಲಿಸಿದ್ದಾನೆ ಎಂದು ದೇವರಾಜ ಪೊಲೀಸರು ತಿಳಿಸಿದ್ದಾರೆ.