ಶಕುಂತಳಾ ಶೆಟ್ಟಿ ಕಣ್ಣೀರಿಗೆ ಜನತೆ ಕರಗುವುದಿಲ್ಲ: ರೀಣಾ ಪ್ರಕಾಶ್
ಪುತ್ತೂರು: ಅಧಿಕಾರದ ಅಮಲಿನಿಂದ ಬಟ್ಟೆ ಬದಲಾಯಿಸಿದಂತೆ ಪಕ್ಷ ಬದಲಾಯಿಸುತ್ತಿರುವ ಪುತ್ತೂರಿನ ಕಾಂಗ್ರೆಸ್ ಆಭ್ಯರ್ಥಿ ಶಕುಂತಳಾ ಶೆಟ್ಟಿ ಕಣ್ಣೀರು ಹಾಕಿದರೆ ಜನತೆ ಕರಗುವುದಿಲ್ಲ. ಕಣ್ಣೀರು ಹಾಕುವ ಹೆಣ್ಣನ್ನು ನಮ್ಮ ಮಹಿಳೆಯರು ನಂಬುವುದಿಲ್ಲ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ರೀಣಾ ಪ್ರಕಾಶ್ ಹೇಳಿದರು.
ಅವರು ಪುತ್ತೂರಿನ ಜೈನ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ತಮ್ಮ ಅಧಿಕಾರ ಅವಧಿಯಲ್ಲಿ ಜನರ ಮಾರಣ ಹೋಮ ನಡೆಸಿರುವ ಕಾಂಗ್ರೆಸ್ ನಿರಂತರವಾಗಿ ಡೀಸೆಲ್, ಪೆಟ್ರೋಲ್ ಹಾಗೂ ಇನ್ನಿತರ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ಒಳಪಡಿಸಿದೆ. ಭಯೋತ್ಪಾದನೆ, ಮತಾಂತರ, ನಕ್ಸಲ್ ಚಟುವಟಿಕೆಯಿಂದ ಜನತೆ ತತ್ತರಿಸಿದ್ದಾರೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಗೋ. ಮಧುಸೂಧನ್ ಮಾತನಾಡಿ, ಕಾಂಗ್ರೆಸ್ನೊಂದಿಗೆ ಕೆಜೆಪಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದು ಭದ್ರಾವತಿಯಲ್ಲಿ ಯುವತಿಯೊಬ್ಬಳನ್ನು ಅತ್ಯಾಚಾರ ನಡೆಸಿ ಕೊಲೆಗೈದಿರುವ ಪಾತಕಿ, ವಿದೇಶಿ ಗೂಡಾಚಾರರೊಂದಿಗೆ ಸಂಪರ್ಕ ಹೊಂದಿರುವ ದೇಶದ ನಂ.1 ದೇಶದ್ರೋಹಿ ಮುಖಂಡರೊಬ್ಬರು ಇದಕ್ಕೆ ಮಧ್ಯಸ್ಥಿಕೆ ವಹಿಸಿದ್ದಾರೆ. ಈ ಒಪ್ಪಂದಕ್ಕೆ ಮಾಜಿ ಸಚಿವೆಯೊಬ್ಬರು ಪ್ರಮುಖ ಸಾಕ್ಷಿಯಾಗಿದ್ದಾರೆ ಎಂದು ಆರೋಪಿಸಿದರು.
ಚಿತ್ರ ನಟಿ ತಾರ ಮಾತನಾಡಿ, ಕೆಲವು ವ್ಯಕ್ತಿಗಳಿಂದ ತಪ್ಪು ಆಗಿರಬಹುದು. ಆದರೆ ಪಕ್ಷದಲ್ಲಿ ತಪ್ಪು ನಡೆದಿಲ್ಲ ಎಂದ ಅವರು ಕಣ್ಣೀರಿಗೆ ಶಕ್ತಿ ಇದೆ. ಆದರೆ ಮೊಸಳೆ ಕಣ್ಣೀರಿಗೆ ಮೋಸ ಹೋಗಬೇಡಿ ಎಂದು ಮಹಿಳಾ ಕಾರ್ಯಕರ್ತೆಯರಿಗೆ ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ ಬಿಜೆಪಿಯಿಂದಲೇ ಅಧಿಕಾರ ಪಡೆದು ಅಧಿಕಾರದ ಅಮಲಿನಿಂದಲೇ ಈಗ ಕಾಂಗ್ರೆಸ್ ಸೇರಿ ಅವಕಾಶ ನೀಡಿದ್ದ ಬಿಜೆಪಿಗೇ ಸಡ್ಡು ಹೊಡೆಯಲು ಹೊರಟಿರುವ ಶಕುಂತಳಾ ಶೆಟ್ಟಿಗೆ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಶಾಸಕಿ ಮಲ್ಲಿಕಾ ಪ್ರಸಾದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ಮತ್ತಿತರರು ಇದ್ದರು.
ಬೈಕ್ ಸವಾರ ದಂಪತಿ ಸಾವು ಪ್ರಕರಣ: ಓರ್ವ ಬಂಧನ
ಬಂಟ್ವಾಳ: ಕಕ್ಯಪದವಿನ ಅಂಕರೋಡಿಯಲ್ಲಿ 18ರಂದು ಬೈಕ್ಗೆ ಡಿಕ್ಕಿಯಾಗಿ ದಂಪತಿ ಸಾವಿಗೆ ಕಾರಣವಾದ ವಾಹನವನ್ನು ಪತ್ತೆ ಹಚ್ಚುವಲ್ಲಿ ಪುಂಜಾಲಕಟ್ಟೆ ಪೊಲೀಸರು ಯಶಸ್ವಿಯಾಗಿದ್ದು ಪಿಕಪ್ನ ಚಾಲಕನನ್ನು ಭಾನುವಾರ ಹೊಸ್ಮಾರಿನಲ್ಲಿ ಬಂಧಿಸಿದ್ದಾರೆ.
ನಾರಾವಿ ಹೊಸ್ಮಾರಿನ ಕಂಡೇವು ಮನೆ ನಿವಾಸಿ ಸಂತೋಷ್ ಜೈನ್ (35)ಬಂಧಿತ ಆರೋಪಿ. ಸಂತೋಷ್ ಜೈನ್ ಚಲಾಯಿಸುತ್ತಿದ್ದ ಪಿಕಪ್ ಬೈಕ್ಗೆ ಡಿಕ್ಕಿಯಾಗಿದ್ದ ಬಳಿಕ ಆತ ವಾಹನ ಸಹಿತ ಪರಾರಿಯಾಗಿದ್ದ.
ಬೆಂಗಳೂರಿನಿಂದ ಉಪ್ಪಿನಂಗಡಿ- ಕಕ್ಯಪದವು ಮಾರ್ಗವಾಗಿ ಬಂಟ್ವಾಳದ ಮಣಿನಾಲ್ಕೂರಿನ ಮನೆಯೊಂದಕ್ಕೆ ಪೀಠೋಪಕರಣಗಳನ್ನು ಸಾಗಿಸುತ್ತಿರುವಾಗ ಅಪಘಾತ ಸಂಭವಿಸಿತ್ತು. ಮಣಿನಾಲ್ಕೂರು ಗ್ರಾಮದ ನಡುಮೊಗರು, ಮುಂಡ್ರೇಲು ನಿವಾಸಿ ಜನಾರ್ದನ ಪೂಜಾರಿ (50) ಹಾಗೂ ಅವರ ಪತ್ನಿ ಜಯಲಕ್ಷ್ಮಿ (45) ಅಪಘಾತದಲ್ಲಿ ಮೃತಪಟ್ಟಿದ್ದರು.
ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿ ಹಾಗೂ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.