ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಳ್ಯ: ಶಾಂತ ಚುನಾವಣೆಗೆ ಸೈನಿಕರ ಕಣ್ಗಾವಲು

Lingaraj Badiger
Updated On : 22 Apr 2013, 12:30 pm

ಸುಳ್ಯ: ವಿಧಾನಸಭಾ ಚುನಾವಣೆಯನ್ನು ಕುತೂಹಲದಿಂದ ಎದುರು ನೋಡುತ್ತಿರುವ ಜನರಿಗೆ ಪ್ಯಾರಾ ಮಿಲಿಟರಿ ಪಡೆಯ ಬೂಟುಗಾಲುಗಳ ಸದ್ದು ಕೇಳಿಸುತ್ತಿದೆ. ಸಶಸ್ತ್ರಧಾರಿ ಸೈನಿಕರು ಅಲ್ಲಲ್ಲಿ ಕಾಣುತ್ತಿದ್ದಾರೆ. ಭಯವನ್ನೂ, ಧೈರ್ಯವನ್ನೂ, ಕುತೂಹಲ, ಆತಂಕವನ್ನೂ ಮೂಡಿಸುತ್ತಿರುವ ಪೊಲೀಸ್ ಕಣ್ಗಾವಲು ಚುನಾವಣಾ ಕದನ ಕಣಕ್ಕೆ ಹೊಸ ರಂಗು ತುಂಬುತ್ತಿದೆ.
ಗಡಿಯಲ್ಲಿ ಕಟ್ಟೆಚ್ಚರ: ಸುಳ್ಯ- ಕಾಸರಗೋಡು ರಸ್ತೆಯ ಗಡಿ ಪ್ರದೇಶವಾದ ಜಾಲ್ಸೂರಿನಲ್ಲಿ ಮತ್ತು ಸುಳ್ಯ- ಪಾಣತ್ತೂರು, ಸುಳ್ಯ- ಬಂದಡ್ಕ ರಸ್ತೆಯ ನಾರ್ಕೋಡಿನಲ್ಲಿ ಸುಳ್ಯ ಪೊಲೀಸರು ಕಣ್ಗಾವಲು ಇರಿಸಿದ್ದು, ಇವರಿಗೆ ಪ್ಯಾರಾ ಮಿಲಿಟರಿ ಪಡೆಯ ಸೈನಿಕರು ಸಾಥ್ ನೀಡುತ್ತಿದ್ದಾರೆ.
  ಈ ಮಾರ್ಗದಲ್ಲಿ ಸಂಚರಿಸುವ ಪ್ರತಿ ವಾಹನಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಚುನಾವಣೆಗೆ ಸಂಬಂಧಪಟ್ಟು ರಾಜ್ಯಕ್ಕೆ ಹಣ ಮತ್ತಿತರ ವಸ್ತುಗಳ ಸಾಗಾಟ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ ಪೊಲೀಸರು ಗಡಿಯಲ್ಲಿ ಕಣ್ಗಾವಲು ಏರ್ಪಡಿಸಿದ್ದಾರೆ. ಸುಳ್ಯ- ಕಾಸರಗೋಡು ಹೆದ್ದಾರಿಯ ಜಾಲ್ಸೂರು ಪ್ರಮುಖ ಕೇಂದ್ರದಲ್ಲಿ ಅರಣ್ಯ ಇಲಾಖೆ ಚೆಕ್‌ಪೋಸ್ಟ್ ಇದ್ದು, ತಪಾಸಣೆ ನಡೆಸಲಾಗುತ್ತದೆ.
ಸುಬ್ರಹ್ಮಣ್ಯದಲ್ಲಿ ಆರ್‌ಪಿಎಫ್ ಪಡೆ: ಸುಬ್ರಹ್ಮಣ್ಯಕ್ಕೆ ಕೇಂದ್ರದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ತಂಡ ಆಗಮಿಸಿದೆ. ಕುಲ್ಕುಂದ ಪ್ರದೇಶವು ನಕ್ಸಲ್ ಪೀಡಿತ ಪ್ರದೇಶವಾದ್ದರಿಂದ ಮತದಾರರು ಮತದಾನ ಮಾಡಲು ಹೆದರದಂತೆ ಹಾಗೂ ಶಾಂತ ರೀತಿಯಲ್ಲಿ ಮತದಾನ ಮಾಡಲು ಹೆಚ್ಚಿನ ಗಮನ ತೆಗೆದುಕೊಳ್ಳಲಾಗಿದೆ. ಆರ್‌ಪಿಎಫ್ ತಂಡದಲ್ಲಿ ಓರ್ವ ಸಹಾಯಕ ಕಮಾಂಡೆಂಟ್, 3 ಕಂಪನಿ ಕಮಾಂಡೆಂಟ್, 3 ಸಬ್ ಇನ್ಸ್‌ಪೆಕ್ಟರ್, 5 ಮಂದಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹಾಗೂ ರೈಫಲ್ ಸಜ್ಜಿತ 79 ಮಂದಿ ಇದ್ದಾರೆ.
ಸ್ಥಳೀಯ ಪ್ರವಾಸಿ ತಾಣ, ಭಾಷೆ, ನಕ್ಸಲ್ ತಾಣ, ಚುನಾವಣೆ ಕ್ರಮಗಳ ಬಗ್ಗೆ ಈಗಾಗಲೇ ಈ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement