ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಹಕ್ಕು ಮತದಾನ
ಬಂಟ್ವಾಳ: ಮತದಾನ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಇರುವ ಹಕ್ಕು. ಬಿಜೆಪಿ ಸರ್ಕಾರ ತಪ್ಪು ಮಾಡಿದೆ. ಅವರಿಗೆ ತಕ್ಕ ಪಾಠ ಕಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈ ಹೇಳಿದರು.
ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟು ಎಂಬಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ದೇಶಪ್ರೇಮ, ಮಾತೆ, ಎಂದೆಲ್ಲಾ ಹೇಳಿ ಜನತೆಯನ್ನು ವಂಚಿಸುತ್ತಿರುವ ಬಿಜೆಪಿ ವಿರುದ್ಧ ಜನ ತಿರುಗಿ ಬಿದಿದ್ದು, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ತಪ್ಪು ಮಾಡಿದ್ದೇವೆ ಮನ್ನಿಸಿ. ಈ ಒಂದು ಸಲ ಮತ ನೀಡಿ ಎಂದು ಬಿಜೆಪಿಯವರು ಜನತೆಯಲ್ಲಿ ಅಂಗಲಾಚುತ್ತಿದ್ದಾರೆ. ಆದರೆ, ಭ್ರಷ್ಟಾಚಾರದಲ್ಲಿ ಸಿಲುಕಿರುವ ಬಿಜೆಪಿಯನ್ನು ಯಾರೂ ನಂಬುವಂತಿಲ್ಲ. ನೀಲಿ ಚಿತ್ರದಂತಹ ಅಪವಾದಕ್ಕೀಡಾಗಿರುವ ಭ್ರಷ್ಟಾಚಾರಿ ಸರ್ಕಾರವನ್ನು ರಾಜ್ಯ ಈವರೆಗೆ ಕಂಡಿಲ್ಲ ಎಂದು ಟೀಕಿಸಿದರು.
ಅಭಿವೃದ್ಧಿಯ ಅಶ್ವಮೇಧದ ಕುದುರೆ ಎಂದು ಬಿಜೆಪಿ ಬಿಟ್ಟಿರುವ ಭ್ರಷ್ಟಾಚಾರದ ಕತ್ತೆಯನ್ನು ಕಟ್ಟಿ ಹಾಕುವ ಅಗತ್ಯತೆ ಕಾಂಗ್ರೆಸಿಗಿಲ್ಲ. ಭ್ರಷ್ಟಚಾರ ತುಂಬಿ ಕೊಂಡಿರುವ ಬಿಜೆಪಿಗೆ ಮೇ 5ರಂದು ಸ್ಪಷ್ಟ ಉತ್ತರ ನೀಡಲಿದ್ದು, ಅಂದು ಗುಂಡಿಗೆ ಬೀಳಲಿರುವ ಬಿಜೆಪಿ ಕತ್ತೆಗೆ ನಾವು- ನೀವು ಕಲ್ಲು ಹಾಕುವ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ನಾಯಕರ ಭ್ರಷ್ಟಾಚಾರದಿಂದಾಗಿ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ಭೇಟಿ ನಡಲು ಮುಜುಗರ ಪಡುತ್ತಿದ್ದಾರೆ. ಮನೆಮನೆಗೆ ಹೋಗಿ ಕಾಲು ಹಿಡಿಯಿರಿ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಬಿಜೆಪಿ ಕಾರ್ಯಕರ್ತರಿಗೆ ಹೇಳುತ್ತಾರೆ. ನಾಯಕರು ತಿಂದು ತೇಗಿದರೆ, ಕಾರ್ಯಕರ್ತರು ಮತದಾರರ ಕಾಲು ಹಿಡಿಯಬೇಕು. ಇಂತಹ ಆಡಳಿತಕ್ಕೆ ಮತ್ತೆ ಅವಕಾಶ ಕೊಡಬೇಡಿ ಎಂದರು.
ಮುಖಂಡರಾದ ಐವನ್ ಡಿ' ಸೋಜ, ಬಿ.ಎಚ್. ಖಾದರ್, ರಿಚಡರ್ ಮೊಂತೆರೋ, ಡೋಲ್ಫಿ ಪ್ರಶಾಂತ್, ಪ್ಲೋಸಿ ಡಿ' ಸೋಜಾ, ವಿಶ್ವನಾಥ ಗೌಡ ಮಣಿ, ಪಿಯುಸ್ ರೋಡ್ರಿಗಸ್, ಜಗದೀಶ ಕೊಯಿಲಾ ಮತ್ತಿತರರು ಇದ್ದರು.