ನರ್ಲಡ್ಕ: ನೀರಿನ ಸಮಸ್ಯೆ ಪ್ರದೇಶಕ್ಕೆ ಅಧಿಕಾರಿಗಳು, ಅಭ್ಯರ್ಥಿಗಳ ಭೇಟಿ
ಸುಳ್ಯ: ಎಣ್ಮೂರು ಗ್ರಾಮದ ನರ್ಲಡ್ಕ ಕಾಲೊನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸ್ಥಳೀಯರು ಚುಣಾವಣಾ ಬಹಿಷ್ಕಾರದ ನಿರ್ಧಾರ ಕೈಗೊಂಡಿರುವ ವಿಷಯ ತಿಳಿದು ಅಧಿಕಾರಿಗಳು ಮತ್ತು ಅಭ್ಯರ್ಥಿಗಳು ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಭರವಸೆ ನೀಡಿದ್ದಾರೆ.
ನರ್ಲಡ್ಕದ ಸುಮಾರು 80 ಮನೆಗಳಿಗೆ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗದಿರುವ ಹಿನ್ನಲೆಯಲ್ಲಿ ಅಲ್ಲಿಯ ನಾಗರಿಕರು ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿ ರಸ್ತೆಯ ಬದಿಯಲ್ಲಿ ಬ್ಯಾನರ್ ಹಾಕಿದ್ದಲ್ಲದೆ ಪ್ರತಿಭಟನೆ ನಡೆಸಿದ್ದರು.
ತಂಡ ಅಧ್ಯಯನ: ಇದೀಗ ಗ್ರಾಮಕರಣಿಕರ ತಂಡ ಅಲ್ಲಿ ಅಧ್ಯಯನ ನಡೆಸಿ ಸಮಸ್ಯೆ ಕುರಿತು ಸುಳ್ಯ ಜಿ.ಪಂ.ಸಹಾಯಕ ಅಭಿಯಂತರರಿಗೆ ವರದಿ ನೀಡಿತ್ತು. ವರದಿ ಆಧಾರದಲ್ಲಿ ಜಿ.ಪಂ. ಸಹಾಯಕ ಅಭಿಯಂತರರು ಹಾಗೂ ಪಂಚಾಯಿತಿ ಕಾರ್ಯದರ್ಶಿ ಕಾಲನಿಗೆ ಭೇಟಿ ನೀಡಿ ಅಹವಾಲು ಆಲಿಸಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಸಂಹಿತೆಯಿಂದ ತೊಡಕು: ಚುನಾವಣಾ ನೀತಿಸಂಹಿತೆ ಇರುವುದರಿಂದ ಹೊಸ ಕಾಮಗಾರಿಗಳನ್ನು ಮಂಜೂರು ಮಾಡಲು ಆಗುವುದಿಲ್ಲ. 2013-14ನೇ ಸಾಲಿನಲ್ಲಿ ಹೊಸ ಬೋರ್‌ವೆಲ್ ಹಾಕಿ ನೀರಿನ ಸೌಲಭ್ಯ ಒದಗಿಸುವ ಭರವಸೆ ನೀಡಿದರೆನ್ನಲಾಗಿದೆ.
ಈಗಿರುವ ಬೋರ್‌ವೆಲ್‌ನ್ನು ಮೆಷಿನ್ ಮೂಲಕ ಆಳ ಮಾಡಿ ಹೆಚ್ಚುವರಿ ಪೈಪ್ ಅಳವಡಿಸಿ ಕೊಡುವುದಾಗಿ ಅವರು ಹೇಳಿ, ಚುನಾವಣೆ ಬಹಿಷ್ಕಾರ ಕೈ ಬಿಡುವಂತೆ ಹೇಳಿದರಲ್ಲದೆ, ಹಾಕಿರುವ ಬ್ಯಾನರ್ ತೆಗೆಯುವಂತೆ ಸೂಚಿಸಿದರು.
ತಮ್ಮ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಂಡರೆ ಪ್ರತಿಭಟನೆ ಕೈಬಿಡುವುದಾಗಿ ಸ್ಥಳೀಯ ನಾಗರಿಕರು ಹೇಳಿದರು.
ಅಂಗಾರ, ರಘು ಭೇಟಿ: ಚುನಾವಣಾ ಬಹಿಷ್ಕಾರ ವಿಷಯ ತಿಳಿದು ಬಿಜೆಪಿ ಅಭ್ಯರ್ಥಿ ಶಾಸಕ ಎಸ್.ಅಂಗಾರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ಕಾಲನಿಗೆ ಭೇಟಿ ನೀಡಿ ಅಲ್ಲಿಯ ನಾಗರಿಕರೊಂದಿಗೆ ಸಮಸ್ಯೆ ಕುರಿತು ಸಮಾಲೋಚನೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಕಾಲನಿಯ ನಾಗರಿಕರು ಇನ್ನೂ ಬ್ಯಾನರ್ ತೆಗೆದಿಲ್ಲ. ಸಮಸ್ಯೆ ನಿವಾರಣೆಯಾದರೆ ನಾವು ಬಹಿಷ್ಕಾರ ಹಿಂತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.