ರಾಜೇಶ್ ನಾಯ್ಕ್ ಮತಯಾಚನೆ
ಬಂಟ್ವಾಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಸೋಮವಾರ ಪಕ್ಷದ ಕಾರ್ಯಕರ್ತರೊಂದಿಗೆ ಮನೆಭೇಟಿ ಹಾಗೂ ಮತದಾರರ ಭೇಟಿ ಕಾರ್ಯಕ್ರಮ ಕೈಗೊಂಡರು. ಬೆಳಗ್ಗೆ ಲೊರೆಟ್ಟೋದಲ್ಲಿರುವ ಗೇರು ಬೀಜ ಕಾರ್ಖಾನೆಗೆ ತೆರಳಿದ ಅವರು, ಅಲ್ಲಿನ ಕಾರ್ಮಿಕರಲ್ಲಿ ಮತ ನೀಡುವಂತೆ ವಿನಂತಿಸಿಕೊಂಡರು. ಬಳಿಕ ಅಣ್ಣಳಿಕೆಯ ವಿವಿಧ ಮನೆಗಳಿಗೆ ತೆರಳಿ ಮತ ಯಾಚಿಸಿದರು. ರಾಯಿ ಪರಿಸರ, ಸಿದ್ದಕಟ್ಟೆ, ಬಿ.ಮೂಡ ಗ್ರಾಮದಲ್ಲಿ ಮತದಾರರನ್ನು ಭೇಟಿ ಮಾಡಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಭಟ್, ತಾ.ಪಂ. ಸದಸ್ಯ ವಸಂತ ಅಣ್ಣಳಿಕೆ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.