ರೆಡ್ಡಿ ಮನೆಗೆ ಬಂದ ಸುಷ್ಮಾ ಲಕ್ಷ್ಮೀ ಒಯ್ದಿಲ್ಲವೇ?
ಮಂಗಳೂರು: ಬಿಜೆಪಿ ಮುಖಂಡ ಲಾಲ್ಕೃಷ್ಣ ಆಡ್ವಾಣಿ ಪ್ರಧಾನಿಯನ್ನು ಬಿಡದೆ ಕೇಂದ್ರ ಸರ್ಕಾರವನ್ನು ಭ್ರಷ್ಟ ಎಂದು ಆರೋಪಿಸುತ್ತಿದ್ದಾರೆ. ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರಗಳಲ್ಲಿ ಭ್ರಷ್ಟಾಚಾರ ಕಾಣುವುದಿಲ್ಲವೇ? ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಇದ್ದರೂ ನೈತಿಕತೆ ಬದಿಗಿಟ್ಟು ಉಪಪ್ರಧಾನಿ ಗದ್ದುಗೆಯಲ್ಲಿ ಕುಳಿತಿಲ್ಲವೇ? ಎಂದು ಕಾಂಗ್ರೆಸ್ ಮುಖಂಡ ಬಿ. ಜನಾರ್ದ ಪೂಜಾರಿ ಹೇಳಿದರು. ಜನಾರ್ದನ ರೆಡ್ಡಿ ಮನೆಗೆ ಬಂದು ಚಿನ್ನದ ಕುರ್ಚಿಯಲ್ಲಿ ಇದೇ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಕುಳಿತಿಲ್ಲವೇ? ಪ್ರತಿ ಬಾರಿ ಲಕ್ಷ್ಮೀ ಪೂಜೆ ನೆಪದಲ್ಲಿ ಬಳ್ಳಾರಿಗೆ ಬಂದು ಲಕ್ಷ್ಮಿಯನ್ನು ಹಿಡಿದುಕೊಂಡು ಹೋಗಿಲ್ಲವೇ. ಈಗ ಭ್ರಷ್ಟಾಚಾರಿಗಳೆಲ್ಲ ಬಿಟ್ಟು ಹೋಗಿದ್ದಾರೆ ಎಂದು ಹೇಳಿದರೆ ಮುಗಿಯಿತೇ ಎಂದು ಲೇವಡಿ ಮಾಡಿದರು.
ಸೋನಿಯಾ 27ಕ್ಕೆ ಮಂಗಳೂರಿಗೆ
ಲೋಕಸಭೆ ಅಧಿವೇಶನ ಆರಂಭವಾಗಿರುವುದರಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಏ.25ರ ಬದಲು ಏ.27ರಂದು ಮಂಗಳೂರಿಗೆ ಆಗಮಿಸುವರು. ಏ.25ರಂದು ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕರ ಟೀಕೆಗೆ ಸಮರ್ಥ ಉತ್ತರ ನೀಡಬೇಕಾಗಿರುವುದರಿಂದ ಸೋನಿಯಾ ಗಾಂಧಿ ಅವರ ಮಂಗಳೂರು ಭೇಟಿ ದಿನ ಬದಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕೃಪಾ ಆಳ್ವ, ಬಲರಾಜ್ ರೈ, ಅಶ್ರಫ್, ಕಳ್ಳಿಗೆ ತಾರಾನಾಥ ಶೆಟ್ಟಿ ಇದ್ದರು.