ಹೈಕಮಾಂಡ್ ಹೇಳಿದರೂ ಸಿಎಂ ಆಗಲಾರೆ: ಆಸ್ಕರ್
ಕುಂದಾಪುರ: ಮುಖ್ಯಮಂತ್ರಿಯಾಗುವಂತೆ ಹೈಕಮಾಂಡ್ ಕರೆದು ಹೇಳಿದರೂ ತಾನು ಮುಖ್ಯಮಂತ್ರಿಯಾಗುವುದಕ್ಕೆ ಸಿದ್ಧನಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಮುಖ್ಯಮಂತ್ರಿಯಾಗುವುದಕ್ಕೆ ಅದರದ್ದೇ ಆದ ಪೂರ್ವ ಸಿದ್ಧತೆಗಳು ಬೇಕಾಗುತ್ತವೆ, ತಾನು ಅಂತಹ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎಂದವರು ತಮ್ಮ ನಿರ್ಧಾರಕ್ಕೆ ಕಾರಣವನ್ನೂ ಹೇಳಿದರು.
ಶನಿವಾರ ಬೈಂದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜನಪ್ರಿಯ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇರುವುದು ಸಹಜ ಎಂದು ಆಸ್ಕರ್, ಕಾಂಗ್ರೆಸ್ ಪಕ್ಷದಲ್ಲಿನ ಬಂಡಾಯವನ್ನು ಸಮರ್ಥಿಸಿಕೊಂಡರು.
ಸಾಲ್ಯಾನ್ ಜೊತೆ ಸಮಾಲೋಚನೆ: ಬಂಡಾಯ ಹಾಗೂ ಅಸಮಾಧಾನಗಳನ್ನು ಸರಿಪಡಿಸುವ ಪ್ರಯತ್ನಗಳಾಗುತ್ತಿವೆ. ಕಾಪು ಕ್ಷೇತ್ರದ ಮಾಜಿ ಶಾಸಕ ವಸಂತ ವಿ. ಸಾಲ್ಯಾನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತೇನೆ. ಅವರ ಭಾವನೆಗಳಿಗೆ ಬೆಲೆ ನೀಡಲಾಗುವುದು. ಕೆಲವೊಂದು ಮಾನದಂಡದಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್ ನೀಡಿದೆ. ಸ್ಪರ್ಧಿಸಲು ಅವಕಾಶ ದೊರಕದ ಪಕ್ಷದ ನಾಯಕರ ತ್ಯಾಗ ಮತ್ತು ಸೇವೆಯನ್ನು ಪಕ್ಷ ಮುಂದೆ ಸೂಕ್ತ ಸಂದರ್ಭದಲ್ಲಿ ಪರಿಗಣಿಸಲಿದೆ ಎಂದು ಭರವಸೆ ನೀಡಿದರು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪ್ಚಂದ್ರ ಶೆಟ್ಟಿ, ಅಭ್ಯರ್ಥಿ ಕೆ.ಗೋಪಾಲ ಪೂಜಾರಿ, ಕಾಂಗ್ರೆಸ್ ನಾಯಕರಾದ ಎಂ.ಎ. ಗಫೂರ್, ಇನಾಯತ್ ಆಲಿ, ದಿನೇಶ್ ಪುತ್ರನ್, ರಾಜು ದೇವಾಡಿಗ, ಅನಂತ ಮೊವಾಡಿ ಮುಂತಾದವರಿದ್ದರು.