ಅಭಿವೃದ್ಧಿಯಲ್ಲಿ ರಾಜ್ಯ ಹಿಂದುಳಿಯಲು ಬಿಜೆಪಿ ಕಾರಣ: ಅಶೋಕ್ ತಲ್ವಾರ್
ಬಂಟ್ವಾಳ: ಅಭಿವೃದ್ಧಿಯಲ್ಲಿ ಒಂದನೇ ಸ್ಥಾನದಲ್ಲಿದ್ದ ಕರ್ನಾಟಕ ಕಳೆದ ಐದು ವರ್ಷಗಳಲ್ಲಿ 13ನೇ ಸ್ಥಾನಕ್ಕೆ ಇಳಿದಿದ್ದು, ಇದಕ್ಕೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರವೇ ಕಾರಣ ಎಂದು ಹರಿಯಾಣದ ಸಂಸದ, ಎಐಸಿಸಿ ಕಾರ್ಯದರ್ಶಿ ಅಶೋಕ್ ತಲ್ವಾರ್ ಆರೋಪಿಸಿದ್ದಾರೆ. ರಾಜ್ಯದಲ್ಲಿ ಸೋನಿಯಾ ಗಾಂಧಿ ಪ್ರವಾಸದ ಉಸ್ತುವಾರಿ ವಹಿಸಿಕೊಂಡಿರುವ ಅವರು, ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಲಾರಪಟ್ಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸಾವಿರಾರು ಕೋಟಿ ರು. ಅನುದಾನ ರಾಜ್ಯಕ್ಕೆ ಹರಿದು ಬರಲಿದೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಮಾತನಾಡಿದರು. ಬಳಿಕ ರಮಾನಾಥ ರೈ ಅವರು ಚೆಂಬುಗುಡ್ಡೆ, ಕುರಿಯಾಳ, ಅಮ್ಮುಂಜೆ, ಕಲಾಯಿ ಪ್ರದೇಶದಲ್ಲಿ ಪ್ರಚಾರ ಕಾರ್ಯ ನಡೆಸಿದರು.
ಕಾಂಗ್ರೆಸ್ ಸೇರ್ಪಡೆ: ಬಿಮೂಡ ಗ್ರಾಮದ ಶಾಂತಿಅಂಗಡಿಯ 18ನೇ ವಾರ್ಡ್‌ನ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಗೊಂಡ ಗಣೇಶ್ ಶೆಣೈ ಹಾಗೂ ಸದಾಶಿವ ಸಾಲ್ಯಾನ್ ಅವರನ್ನು ರಮಾನಾಥ ರೈ ಶಾಲು ಹಾಕಿ ಬರಮಾಡಿಕೊಂಡರು. ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ಸಾಹುಲ್ ಹಮೀದ್, ಪುರಸಭಾ ಸದಸ್ಯರಾದ ಸದಾಶಿವ ಬಂಗೇರ, ರಾಮಕೃಷ್ಣ ಆಳ್ವ, ಹಿರಿಯ ಕಾಂಗ್ರೆಸಿಗ ಜನಾರ್ದನ ಶೆಟ್ಟಿ ಇದ್ದರು.