ಕವಳೆ ಮಠಾಧೀಶ ಶಿವಾನಂದ ಸರಸ್ವತಿ ಸ್ವಾಮೀಜಿ ಸುಳ್ಯ ಪುರ ಪ್ರವೇಶ
ಸುಳ್ಯ: ಭಾಲಾವಲಿಕಾರ್ ರಾಜಾಪುರ ಸಾರಸ್ವತ ಸಮಾಜದ ಗುರುವರ್ಯರಾದ ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕವಳೆ ಮಠಾದೀಶ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ತಮ್ಮ ಮೂರು ದಿನಗಳ ಸುಳ್ಯ ಮೊಕ್ಕಾಂ ಹಾಗೂ ಧಾರ್ಮಿಕ ಅನುಷ್ಠಾನ ಕಾರ್ಯಕ್ರಮಗಳಿಗಾಗಿ ಸುಳ್ಯಕ್ಕೆ ಆಗಮಿಸಿದ್ದಾರೆ. ಮಂಗಳವಾರ ಸಂಜೆ ಶ್ರೀ ಗುರುಗಳು ಪುರ ಪ್ರವೇಶ ಮಾಡಿದಾಗ, ಲಾಲ್ಬಹುದ್ದೂರ್ ಶಾಸ್ತ್ರೀ ವೃತ್ತದಿಂದ ಅವರನ್ನು ಭವ್ಯ ಮೆರವಣಿಗೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರಕ್ಕೆ ಕೊಂಡೊಯ್ಯಲಾಯಿತು. ಏ.26ರವರೆಗೆ ಸ್ವಾಮೀಜಿಯವರು ಸುಳ್ಯದಲ್ಲಿ ವಾಸ್ತವ್ಯ ಹೂಡಲಿದ್ದು ಪಾದಪೂಜೆ, ಭಿಕ್ಷಾಸೇವೆ, ಆಶೀರ್ವಚನ, ಅನ್ನಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.