ಕುಕ್ಕೆ ಸುಬ್ರಹ್ಮಣ್ಯ: ಮೇ 2ರಂದು ಸಾಮೂಹಿಕ ಉಚಿತ ವಿವಾಹ
ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವತಿಯಿಂದ ಸಾಮೂಹಿಕ ಉಚಿತ ವಿವಾಹವು ಮೇ 2ರಂದು ಗುರುವಾರ ಬೆಳಗ್ಗೆ 11.09ರ ಕರ್ಕಾಟಕ ಲಗ್ನದ ಸುಮುಹೂರ್ತದಲ್ಲಿ ಗಣಹೋಮ ಹಾಗೂ ವೈದಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.
ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲಿಚ್ಚಿಸುವವರು ಏ. 25ರಂದು ಅಪರಾಹ್ನ ಗಂಟೆ 5ಯೊಳಗೆ ದೇವಳದ ಕಚೇರಿಯಲ್ಲಿ ಹೆಸರು ದಾಖಲಿಸಬಹುದು. ವಧು, ವರರ ಹೆಸರು, ವಯಸ್ಸಿನ ಬಗ್ಗೆ ಪ್ರಮಾಣ ಪತ್ರದ ದೃಢೀಕರಣದ ಬಗ್ಗೆ ಶಾಲಾ ಸರ್ಟಿಫಿಕೇಟ್, ಪಾಸ್‌ಪೋರ್ಟ್ ಪ್ರತಿ, ಚುನಾವಣಾ ಗುರುತಿನ ಚೀಟಿ, ಡ್ರೈವಿಂಗ್ ಲೈಸನ್ಸ್ ಇವುಗಳಲ್ಲಿ ಯಾವುದಾದರು ಒಂದರ ದಾಖಲೆಯ ದೃಢೀಕೃತ ಪ್ರತಿಯನ್ನು ಅಗತ್ಯವಾಗಿ ಲಗತ್ತಿಸಬೇಕು. ಹಿರಿಯರ ಒಪ್ಪಿಗೆ ಪತ್ರ, ಅವಿವಾಹಿತ ಯಾ ಅವಿವಾಹಿತೆ ಎಂಬುದಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಅಥವಾ ಅಭಿವೃದ್ಧಿ ಅಧಿಕಾರಿಯವರಿಂದ ದೃಢಪತ್ರಿಕೆ ಪಡೆದು, ಅದರೊಂದಿಗೆ ವಧೂ ವರರ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಎರಡು ಭಾವಚಿತ್ರಗಳೊಂದಿಗೆ ದೇವಳಕ್ಕೆ ಒಪ್ಪಿಸಬೇಕು. ವಿವಾಹದ ದಿವಸಕ್ಕೆ ವಧುವಿಗೆ 18 ವರ್ಷ ಮತ್ತು ವರನಿಗೆ 21 ವರ್ಷ ಪೂರ್ತಿಯಾಗಿರಬೇಕು.
ದೇವಳದಿಂದ ವಧುವಿಗೆ ಸೀರೆ, ರವಕೆ ಕಣ ಹಾಗೂ ಮಂಗಳ ಸೂತ್ರ, ವರನಿಗೆ ಧೋತಿ, ಶಾಲು, ಶರ್ಟ್ ಪೀಸು ಒದಗಿಸಲಾಗುವುದು. ಪ್ರತಿ ಮದುವೆ ಪಂಗಡದ 10 ಜನರಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಮಾಡಲಾಗುತ್ತದೆ. ಅಪೂರ್ಣ ಮಾಹಿತಿಗಳ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೇವಳದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ದೇವಳದ ಪ್ರಕಟಣೆ ತಿಳಿಸಿದೆ.