ಧನಂಜಯ್ ಹೇಳಿಕೆ ಕೀಳು ರಾಜಕಾರಣ: ಕ್ಯಾ. ಕಾರ್ಣಿಕ್
ಪುತ್ತೂರು: ಬಿಜೆಪಿ ವರಿಷ್ಠ ಎಲ್.ಕೆ. ಆಡ್ವಾಣಿ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿರುವ ಧನಂಜಯ ಕುಮಾರ್ ಅವರ ಹೇಳಿಕೆ ಕೀಳು ರಾಜಕಾರಣವಾಗಿದ್ದು, ಆ ವ್ಯಕ್ತಿಯ ಅಲ್ಪತನವನ್ನು ಸೂಚಿಸುತ್ತದೆ. ಈ ಹಿನ್ನಲೆಯಲ್ಲಿ ಧನಂಜಯ ಕುಮಾರ್ ಅವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದೇ ಉತ್ತಮ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಮಂಗಳವಾರ ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜಕೀಯದಲ್ಲಿ ಅವಕಾಶಗಳನ್ನು ಗೌರವಿಸಬೇಕು, ಆದರೆ ಅಪೇಕ್ಷೆ ಪಡಬಾರದು ಎಂದರು.
ಶಕುಂತಳಾಗೆ ವಂಚನೆಯಾಗಿಲ್ಲ: ಬಿಜೆಪಿಯಿಂದ ಶಕುಂತಳಾ ಶೆಟ್ಟಿ ಅವರಿಗೆ ಯಾವುದೇ ವಂಚನೆಯಾಗಿಲ್ಲ ಆದರೆ ಪಕ್ಷಕ್ಕೆ ಅವರಿಂದ ವಂಚನೆಯಾಗಿದೆ. ಹಿಂದೆಲ್ಲಾ ಬಹು ಸಂಖ್ಯಾತರಿಗೆ ಗೌರವ ನೀಡಿ ಎಂದಿದ್ದ ಅವರು ಇದೀಗ ಕಾಂಗ್ರೆಸ್ಗೆ ಹೋಗಿ ಬಹುಸಂಖ್ಯಾತರ ಮನಸ್ಸಿಗೆ ಘಾಸಿ ಮಾಡಿದ್ದಾರೆ. ಹೊಳೆ ದಾಟಿದ ಮೇಲೆ ಅಂಬಿಗನ ಮರೆತಿರುವ ಶಕುಂತಳಾ ಶೆಟ್ಟಿ ಕೇವಲ ಒಂದು ಸಮುದಾಯದ ಸಹಕಾರದಿಂದ ಜನಪ್ರತಿನಿಧಿಯಾಗಲು ಸಾಧ್ಯವಿಲ್ಲ. ಈ ಹಿಂದೆ ಅವರು ಪ್ರತಿಪಾದಿಸಿದ್ದ ಗೋಹತ್ಯೆ ನಿಷೇದ ಮಸೂದೆ ಕುರಿತು ಶಕುಂತಳಾ ಶೆಟ್ಟಿ ಅವರ ನಿಲುವನ್ನು ಸ್ಪಷ್ಟ ಪಡಿಸಲಿ ಎಂದು ಸವಾಲು ಹಾಕಿದರು.
ಕೆಜೆಪಿ ಸ್ಪರ್ಧೆಯಿಂದ ಬಿಜೆಪಿಗೆ ಅಲ್ಪ ಪ್ರಮಾಣದಲ್ಲಿ ನಷ್ಟವಾಗಬಹುದು, ಆದರೆ ಅಭಿವೃದ್ಧಿ ದೃಷ್ಟಿಯಿಂದ ಮತದಾರರು ತಮ್ಮ ಮತ ಹಾಳಾಗಬಾರದು ಎಂಬ ಕಾರಣಕ್ಕೆ ಜವಾಬ್ದಾರಿಯುತವಾಗಿ ಮತದಾನ ಮಾಡುತ್ತಾರೆ. ಇದರಿಂದ ಬಿಜೆಪಿ ಗೆಲವು ಸಾಧಿಸುವಲ್ಲಿ ತೊಡಕಾಗುವುದಿಲ್ಲ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂಬ ವೀರಪ್ಪ ಮೊಯ್ಲಿ ಹೇಳಿಕೆಯನ್ನು ಟೀಕಿಸಿದ ಅವರು ಇದೀಗ ಕಾಂಗ್ರೆಸಿಗರು ತಮ್ಮ ಕಾರ್ಯಕರ್ತರಿಗೆ ಅಡುಗೆ ಮನೆಗೆ ಹೋಗಿ ಮತಯಾಚಿಸಿ ಎನ್ನುತ್ತಿದ್ದಾರೆ ಎಂದು ಹೇಳಿದರು.
ತಮ್ಮ ಅಧಿಕಾರ ಅವಧಿಯಲ್ಲಿ ಗ್ಯಾಸ್ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಏರಿಸಿ ಅಡುಗೆ ಮನೆಗೆ ಕಾಲಿಡದಂತೆ ಮಾಡಿದ್ದಾರೆ. ಇದೀಗ ಯಾವ ಮುಖ ಹೊತ್ತು ಅಡುಗೆ ಮನೆಗೆ ಹೋಗಿ ಮತ ಕೇಳುತ್ತಾರೆ ಎಂದು ಟೀಕಿಸಿದರು.
ಡೀವಿ ಬಗ್ಗೆ ಅಪಪ್ರಚಾರ: ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದ ಅವರು ಸಣ್ಣ ಪುಟ್ಟ ಗೊಂದಲಗಳಿದ್ದರೂ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡಿದೆ. ರಾಜ್ಯದಲ್ಲಿ ಅಭಿವೃದ್ಧಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಸಾಧನೆಯಾಗಿದೆ. ಡಿ.ವಿ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಯಿದ್ದರೂ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರ ಸಕಾಲ ಯೋಜನೆಯ ಬಗ್ಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಗ್ಯೂ ಅವರ ಬಗ್ಗೆ ಚುನಾವಣೆಯ ವೇಳೆ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಅವರು ದೂರಿದರು.
---