ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಕ್ಷಗಳ ಇ-ಮೇಲ್ ಸುದ್ದಿ ಜಮಾನ!

Lingaraj Badiger
Updated On : 24 Apr 2013, 11:21 am

ಮಂಗಳೂರು: ಸಾಮಾನ್ಯವಾಗಿ ದೊಡ್ಡ ಪ್ರಚಾರ ಸಭೆ ಹೊರತುಪಡಿಸಿದರೆ ಸಣ್ಣ ಸಣ್ಣ ಪ್ರಚಾರ ಸಭೆಗಳಿಗೆ ಮಾಧ್ಯಮ ಮಂದಿ ಹಾಜರಿರುವುದಿಲ್ಲ. ಇದು ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲ ತಾಲೂಕು ಮಟ್ಟದಲ್ಲಿಯೂ ಹೀಗೆಯೇ. ಆದರೆ ಪ್ರಚಾರದ ಹಿಂದೆ ಬೀಳುವ ರಾಜಕೀಯ ಪಕ್ಷಗಳು ಬಿಡಬೇಕಲ್ಲ. ಮಾಧ್ಯಮದವರು ಬಾರದಿದ್ದರೂ ಅವರ ಕಾಲಬುಡಕ್ಕೆ ಪತ್ರಿಕಾ ವರದಿಯನ್ನು ಕಳುಹಿಸುವುದು ಮಾಮೂಲು. ಈಗ ಇನ್ನೂ ಒಂದು ಹೆಜ್ಜೆಮುಂದೆ ಹೋಗಿ ಎಲ್ಲವೂ ಇ-ಮೇಲ್ ಮೂಲಕ ರವಾನೆಯಾಗುತ್ತದೆ. ರಾಜಕೀಯ ಪಕ್ಷಗಳು ಸಭೆ ನಡೆದ ಸ್ಥಳದಿಂದಲೇ ಕ್ಷಣ ಮಾತ್ರದಲ್ಲಿ ಫೋಟೋ ಸಹಿತ ವರದಿಯನ್ನು ಇ-ಮೇಲ್ ಮಾಡಿಬಿಡುತ್ತವೆ. ಮಾಹಿತಿ ತಂತ್ರಜ್ಞಾನವನ್ನು ಈ ರೀತಿ ಸುಲಭವಾಗಿ ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ.
ಎಲ್ಲವೂ ಇ-ಮೇಲ್‌ನಲ್ಲಿ: ಚುನಾವಣೆಗೆ ಮೊದಲು ಸಭೆ ಸಮಾರಂಭಗಳ ವರದಿ ಮಾಧ್ಯಮ ಕಚೇರಿಗೆ ತಲುಪಿಸುತ್ತಿದ್ದುದು ಕೈಯಾರೆ ಅಥವಾ ಪ್ರೆಸ್‌ಕ್ಲಬ್ ಮುಖೇನ. ಯಾವಾಗ ಚುನಾವಣೆ ಘೋಷಣೆಯಾಯಿಯೋ ಆಗಿಂದಲೇ ಮಾಧ್ಯಮ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆಯನ್ನು ರಾಜಕೀಯ ಪಕ್ಷಗಳು ಬಳಸಿಕೊಂಡಿವೆ. ಚುನಾವಣಾ ಖರ್ಚುವೆಚ್ಚದ ದೃಷ್ಟಿಯಿಂದ ಇದು ಮಿತವ್ಯಯ ಎನ್ನುವುದು ಅವರ ವಾದ.
 ಪ್ರಮುಖವಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈ ವ್ಯವಸ್ಥೆ ಮಾಡಿಕೊಂಡಿವೆ. ಪಕ್ಷದ ಆಗುಹೋಗುಗಳಿಗೆ ಬಳಕೆಯಾಗುತ್ತಿದ್ದ ಆನ್‌ಲೈನ್‌ನ್ನು ಸದ್ಯದ ಮಟ್ಟಿಗೆ ಮಾಧ್ಯಮ ಸಂಪರ್ಕಕ್ಕೆ ಬಳಸಿಕೊಳ್ಳುತ್ತಿವೆ. ಈ ಹೈಟೆಕ್ ವ್ಯವಸ್ಥೆಯಿಂದ ಅಭ್ಯರ್ಥಿ ಎಲ್ಲಿಯೇ ಪ್ರಚಾರ ಮಾಡಲಿ, ಕ್ಷಣ ಮಾತ್ರದಲ್ಲಿ ಪ್ರಾಚಾರದ ಸಮಗ್ರ ವಿವರ ಆಯಾ ಪತ್ರಿಕೆಗೆ ಇ-ಮೇಲ್‌ನಲ್ಲಿ ತಲಪುತ್ತದೆ. ಈ ಮೂರು ಪಕ್ಷಗಳು ಸುದ್ದಿಕಳುಹಿಸಲು ಬೇಕಾದ ಫೋಟೋ, ಸುದ್ದಿ ಬರೆಯುವ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿವೆ.
ಚುನಾವಣಾ ದೃಷ್ಟಿಯಿಂದ ಪಕ್ಷದ ವತಿಯಿಂದ ಮಾಧ್ಯಮ ವಿಭಾಗ ತೆರೆಯಲಾಗಿದೆ. ಚುನಾವಣೆಯಲ್ಲಿ ಮಾಧ್ಯಮಕ್ಕೆ ಇಲ್ಲಿಂದಲೇ ಇ-ಮೇಲ್‌ನಲ್ಲಿ ಸುದ್ದಿ, ಚಿತ್ರಗಳು ರವಾನೆಯಾಗುತ್ತವೆ.
 ಮಾಧ್ಯಮಕ್ಕೆ ಕಾಲಕಾಲಕ್ಕೆ ಸುದ್ದಿ ತಲಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ ಎನ್ನುತ್ತಾರೆ ಬಿಜೆಪಿ ಮಾಧ್ಯಮ ಪ್ರಮುಖ್ ರಾಜಗೋಪಾಲ ರೈ. ಕಾಂಗ್ರೆಸ್‌ನ ಮಂಗಳೂರು ದಕ್ಷಿಣ ಕ್ಷೇತ್ರ ಅಭ್ಯರ್ಥಿ ಪರ ಇ-ಮೇಲ್ ಸುದ್ದಿಗಳು ಬರುತ್ತಿವೆ. ಅವರದೇ ಹೆಸರಿನಲ್ಲಿ ಸುದ್ದಿ ರವಾನೆಯಾಗುತ್ತಿದ್ದು, ಜೆಡಿಎಸ್ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಸಿಪಿಎಂ ಪರವಾಗಿ ಕೆಲವು ಸುದ್ದಿಗಳು, ಖಂಡನಾ ಹೇಳಿಕೆಗಳು ಇ-ಮೇಲ್‌ನಲ್ಲಿ ಕಾಣಿಸುತ್ತಿವೆ.
ಪ್ರಚಾರ ವರದಿಗೂ ಆಯೋಗ ಕಣ್ಣು: ಜಿಲ್ಲಾ ಕೇಂದ್ರಗಳಲ್ಲಿ ಅಲ್ಲದೆ ಕ್ಷೇತ್ರ ಮಟ್ಟದಲ್ಲೂ ಮಾಧ್ಯಮಗಳಿಗೆ ವರದಿ ಕಳುಹಿಸಲು ರಾಜಕೀಯ ಪಕ್ಷಗಳು ಇ-ಮೇಲ್‌ನ್ನು ನೆಚ್ಚಿಕೊಂಡಿದ್ದಾರೆ. ಇದು ಜಿಲ್ಲಾ ಚುನಾವಣಾ ವಿಭಾಗದ ಕೆಂಗಣ್ಣಿಗೆ ಗುರಿಯಾದ ನಿದರ್ಶನ ಇದೆ.
ರಾಜಕೀಯ ಪಕ್ಷಗಳು ಇ-ಮೇಲ್ ಮುಖೇನ ಸುದ್ದಿ ಕಳುಹಿಸಿದಾಗ ಕೆಲವೊಮ್ಮೆ ಮಾಧ್ಯಮಗಳಲ್ಲಿ ಎಲ್ಲರ ಪ್ರಚಾರ ಸುದ್ದಿ ಬದಲು ಒಂದೇ ಪಕ್ಷಕ್ಕೆ ಸೇರಿದ ಪ್ರಚಾರ ಸುದ್ದಿ ಪ್ರಕಟವಾಗುವುದು ಇದೆ. ಇದನ್ನು ಮಾಧ್ಯಮ ಕಣ್ಗಾವಲು ವಿಭಾಗ(ಎಂಸಿಎಂಸಿ) ತಪ್ಪಾಗಿ ಪೇಯ್ಡ್ ಸುದ್ದಿ ಎಂಬ ತೀರ್ಮಾನಕ್ಕೆ ಬಂದಿದ್ದಿದೆ. ಇನ್ನೊಂದೆಡೆ ಆಯೋಗದ ಅನುಮತಿ ಇಲ್ಲದೆ ಸುದ್ದಿಕಳುಹಿಸುತ್ತಾರೆ ಎಂಬ ಆಕ್ಷೇಪವನ್ನು ಚುನಾವಣಾಧಿಕಾರಿಗಳು ವ್ಯಕ್ತಪಡಿಸುತ್ತಾರೆ. ಒಟ್ಟಾರೆಯಾಗಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಚುನಾವಣಾ ಪ್ರಚಾರ ವರದಿಗಳ ಬಗ್ಗೂ ನಿಗಾ ಇರಿಸುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಹರ್ಷಗುಪ್ತ.
-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement