ಪೆರ್ನೆ ಟ್ಯಾಂಕರ್ ದುರಂತ: ಗಾಯಾಳು ಮಹಿಳೆ ಸಾವು
ಉಪ್ಪಿನಂಗಡಿ: ಪೆರ್ನೆಯಲ್ಲಿ ಇತ್ತೀಚೆಗೆ ಸಂಭವಿಸಿದ ಟ್ಯಾಂಕರ್ ಅಪಘಾತದಿಂದ ಉಂಟಾದ ಅಗ್ನಿ ಅನಾಹುತದಿಂದ ಗಾಯಗೊಂಡಿದ್ದ ಹಜೀಮಾ (70) ಎಂಬಾಕೆ ಮಂಗಳವಾರ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 11ಕ್ಕೇರಿದೆ. ಮಂಗಳೂರಿನಿಂದ ಅಡುಗೆ ಅನಿಲವನ್ನು ಹೇರಿಕೊಂಡು ಬೆಂಗಳೂರಿನತ್ತ ಸಾಗುತ್ತಿದ್ದ ಟ್ಯಾಂಕರ್, ಚಾಲಕನ ನಿರ್ಲಕ್ಷ್ಯದಿಂದಾಗಿ ಹೆದ್ದಾರಿ ಬದಿಗೆ ಮಗುಚಿ ಬಿದ್ದು, ಅನಿಲ ಸೋರಿಕೆಯಿಂದ ಅಗ್ನಿ ಸ್ಪರ್ಶವಾಗಿ ಎಂಟು ಮಂದಿ ಘಟನೆ ದಿನವೇ ಸಾವನ್ನಪ್ಪಿದ್ದರು. ನಂತರದ ದಿನಗಳಲ್ಲಿ ಇನ್ನಿಬ್ಬರು ಮೃತಪಟ್ಟಿದ್ದರೆ, ಘಟನೆ ಸಂಭವಿಸಿ ಎರಡು ವಾರಗಳು ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಜೀಮಾ ಮೃತಪಟ್ಟಿದ್ದಾರೆ. ಹಜಿಮಾ ಅವರಿಗೆ ಐವರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ. ದುರ್ಘಟನೆಯಲ್ಲಿ ಇವರ ಮನೆಯು ಸಂಪೂರ್ಣ ಅಗ್ನಿಗಾಹುತಿಯಾಗಿದ್ದು, ಜೊತೆಗಿದ್ದ ಸೊಸೆ ಸಫಿಯಾ ಕೂಡಾ ಗಾಯಗೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಕೆಯಾಗಿದ್ದಾರೆ. ದುರ್ಘಟನೆಗೆ ಸಿಲುಕಿ ಗಾಯಗೊಂಡರೂ ಬದುಕಿ ಉಳಿದವು ಸಫಿಯಾ ಮಾತ್ರ. ಪ್ರಕರಣದ ಬಗ್ಗೆ ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಕಾರು ಚಾಲಕನಿಂದ ಅತ್ಯಾಚಾರ
ಉಪ್ಪಿನಂಗಡಿ: ಮನೆಯೊಡತಿಗೆ ವಂಚಿಸಿ, ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಕಾರು ಚಾಲಕನ ವಿರುದ್ಧ ಉಪ್ಪಿನಂಗಡಿ ಪೊಲೀಸರು ಕೇಸು ದಾಖಲಿಸಿದ್ದಾರೆ. ನೆಲ್ಯಾಡಿಯ ಪಡುಬೆಟ್ಟು ಮನೆ ನಿವಾಸಿಯಾಗಿರುವ ವಿವಾಹಿತ ಮಹಿಳೆಯೊಬ್ಬರು, ಔಷಧ ತರಲೆಂದು ಪುತ್ತೂರಿಗೆ ಹೊರಟಾಗ, ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಬಂದ ಆಕೆಯ ಮನೆಯ ಕಾರು ಚಾಲಕ ರೆಹಮಾನ್ ಎಂಬಾತ ತಾನು ನಿಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುವೆಂದು ನಂಬಿಸಿ, ಬಸ್ ಹತ್ತುವಂತೆ ಮಾಡಿದ್ದ. ಬಸ್ಸು ಪುತ್ತೂರಿಗೆ ಹೋಗುವ ಬಸ್ಸಾಗಿರದೇ ಜಾವಗಲ್‌ಗೆ ಹೋಗುವ ಬಸ್ಸಾಗಿತ್ತು. ಬಸ್ ಜಾವಗಲ್ ತಲುಪುತ್ತಿದ್ದಂತೆ ತನ್ನನ್ನು ಇಲ್ಲಿಗೆ ಯಾಕೆ ಕರೆ ತಂದಿರುವುದು ಎಂದು ಪ್ರಶ್ನಿಸಿದಾಗ ಇಲ್ಲಿ ನನಗೆ ಗೊತ್ತಿರುವ ವೈದ್ಯರಿದ್ದಾರೆ. ಅವರಿಗೆ ನಿಮ್ಮನ್ನು ತೋರಿಸಿ ಔಷಧ ಪಡೆಯಬಹುದು ಎಂದು ತಿಳಿಸಿ, ಜಾವಗಲ್ ಮಸೀದಿ ಮುಂಭಾಗದ ಕಟ್ಟಡದ ಕೊಠಡಿಯನ್ನು ಬಾಡಿಗೆ ಪಡೆದು ಇಚ್ಚೆಗೆ ವಿರುದ್ಧವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ದೂರಲಾಗಿದೆ. ಅತ್ಯಾಚಾರದಿಂದ ನಲುಗಿ ಹೋಗಿರುವ ಮಹಿಳೆ ಅಸ್ವಸ್ಥಳಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅತ್ಯಾಚಾರಕ್ಕೀಡಾದ ಮಹಿಳೆಯ ಗಂಡ ವಿದೇಶದಲ್ಲಿದ್ದು, ಆರೋಪಿ ಅವರ ಮನೆಯ ಕಾರಿನ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.