ಬಾಲಕಿಯ ಅಪಹರಣ: ಆರೋಪಿ ಸೆರೆ
ಉಪ್ಪಿನಂಗಡಿ: ತಾನು ಕೆಲಸ ಮಾಡಿಕೊಂಡಿದ್ದ ಮನೆಯ ಮಾಲೀಕರ ಅಪ್ರಾಪ್ತ ವಯಸ್ಕ ಮಗಳನ್ನೇ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಆರೋಪಿ ವಿನ್ಸಿ ಸೆರಾವೋ ಎಂಬಾತನನ್ನು ಬಂಧಿಸಿದ್ದಾರೆ.
ಕೊಕ್ಕಡ ತಿಪ್ಪೆಮಜಲು ಮನೆ ನಿವಾಸಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ 34ನೇ ನೆಕ್ಕಿಲಾಡಿಯ ನಿವಾಸಿಯಾಗಿರುವ ವಿನ್ಸಿ ಸೆರಾವೋ ಭಾನುವಾರ ಆ ಮನೆಯ ಮಗಳನ್ನು ಅಪಹರಿಸಿದ್ದಾನೆ ಎಂದೂ ಬಾಲಕಿಯ ತಾಯಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಉಪ್ಪಿನಂಗಡಿ ಪೊಲೀಸರು ಪ್ರಕರಣದ ಜಾಡು ಹಿಡಿದು ವಿನ್ಸಿ ಸೆರಾವೋ ಮತ್ತು ಬಾಲಕಿಯನ್ನು ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಈ ಹಿಂದೆ ಎರಡು ಮದುವೆಯಾಗಿದ್ದರೂ ಅನಾರೋಗ್ಯಕ್ಕೀಡಾಗಿ ಸಾವಿಗೀಡಾದ ಇಬ್ಬರೂ ಪತ್ನಿಯರನ್ನು ಕಳೆದುಕೊಂಡು ವಿದುರನಾಗಿದ್ದ ವಿನ್ಸಿ ಸೆರಾವೋನನ್ನು ಮದುವೆಯಾಗಲು ಇಚ್ಚಿಸಿ ಬಾಲಕಿಯೇ ಮನೆ ಬಿಟ್ಟು ಬಂದಿರುವುದು ಎಂದು ಹೇಳಲಾಗುತ್ತಿದೆಯಾದರೂ ಅಪ್ರಾಪ್ತ ವಯಸ್ಕಳಾದ ಬಾಲಕಿಯ ಅಭಿಪ್ರಾಯವನ್ನು ಕಾನೂನು ಮಾನ್ಯ ಮಾಡದ ಕಾರಣ ಪ್ರಕರಣವನ್ನು ಬಾಲಕಿಯ ಅಪಹರಣವನ್ನಾಗಿ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.