ಸಿದ್ದರಾಮಯ್ಯ, ಪೂಜಾರಿಗೆ ಬಿಜೆಪಿ ತಿರುಗೇಟು
ಮಂಗಳೂರು: 'ಕೋಮು ಆಧಾರದಲ್ಲಿ ಬಿಜೆಪಿ ಸಮಾಜವನ್ನು ಒಡೆಯುತ್ತದೆ' ಎಂಬ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿಕೆ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ತು ಸದಸ್ಯ ಗಣೇಶ್ ಕಾರ್ಣಿಕ್, ಕಾಂಗ್ರೆಸ್ ಒಡೆಯುವ ಕೆಲಸದಲ್ಲಿ ನುರಿತ ಪಕ್ಷವಾಗಿದೆ. ಕೋಮು ಪದಕ್ಕೆ ಕಾಂಗ್ರೆಸ್ ಶಬ್ದಕೋಶದಲ್ಲಿ ಬಹಳ ಮಹತ್ವ ಪಡೆದಿದೆ ಎಂದು ಟೀಕಿಸಿದ್ದಾರೆ.
'ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರು ಮೊದಲೇ ಸಿಎಂ ಹೆಸರು ಘೋಷಿಸುತ್ತಾರೆ' ಎಂದು ಹೇಳಿರುವ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿಕೆಗೆ ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಅರ್ಥಶೂನ್ಯ ಹೇಳಿಕೆ ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಮತದಾರರಿಂದ ತಿರಸ್ಕೃತವಾದ ಜನಾರ್ದನ ಪೂಜಾರಿ ಹೇಳಿಕೆಯನ್ನು ಜನತೆ ನಂಬಬಾರದು ಎಂದು ಅವರು ಹೇಳಿದ್ದಾರೆ. ವೀರನಗರದಲ್ಲಿ ಬೇರೆ ಪಕ್ಷದಿಂದ ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷೆ ಪುಷ್ಪಲತಾ ಗಟ್ಟಿ, ಮಹಿಳಾ ಕಾರ್ಯಕರ್ತರು ಬಿಜೆಪಿ ಆಸ್ತಿ ಎಂದಿದ್ದಾರೆ. ದಕ್ಷಿಣ ಕ್ಷೇತ್ರ ಅಭ್ಯರ್ಥಿ ಯೋಗೀಶ್ ಭಟ್ ಮಹಿಳಾ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಕೆಜೆಪಿ ಚುನಾವಣೆ ಸಂಚಾಲಕರ ನೇಮಕ
ಮಂಗಳೂರು: ಕೆಜೆಪಿ ಜಿಲ್ಲೆಯ 8 ಕ್ಷೇತ್ರಗಳಿಗೆ ಚುನಾವಣೆ ಸಂಚಾಲಕರನ್ನು ನೇಮಿಸಿದೆ. ಜಿಲ್ಲೆಯಲ್ಲಿ 8 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಜಿಲ್ಲಾ ಚುನಾವಣೆ ಸಂಚಾಲಕರನ್ನಾಗಿ ರಾಜ್ಯ ಅಲ್ಪಸಂಖ್ಯಾತ ಘಟಕ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಬೈಕಂಪಾಡಿ ಅವರನ್ನು ಜಿಲ್ಲಾಧ್ಯಕ್ಷರು ನೇಮಕ ಮಾಡಿದ್ದಾರೆ ಎಂದು ಮಂಗಳೂರು ಕೆಜೆಪಿ ಅಭ್ಯರ್ಥಿ ರವೀಂದ್ರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರಿಗೆ ಹಮೀದ್ ಕಂದಕ್, ಮಂಗಳೂರು ದಕ್ಷಿಣಕ್ಕೆ ಗೋಕುಲದಾಸ್ ಭಂಡಾರ್ಕರ್, ಉತ್ತರಕ್ಕೆ ಶಿವಪ್ಪ ಪಚ್ಚನಾಡಿ, ಬಂಟ್ವಾಳಕ್ಕೆ ನಾಗೇಶ್, ಮೂಡುಬಿದರೆಗೆ ಡಾ.ಲಾರೆನ್ಸ್ ಡಿಸೋಜ, ಪುತ್ತೂರಿಗೆ ಅಶೋಕ್ ಕುಮಾರ್ ಜೈನ್, ಬೆಳ್ತಂಗಡಿಗೆ ಹಮೀದ್ ಕುದ್ರೋಳಿ, ಸುಳ್ಯ ರಾಜಪಲ್ಲಮಜಲು ಅವರನ್ನು ನೇಮಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೈ.ಜಿ.ಗುರುಚಂದ್ರ ಹೆಗಡೆ, ಶಿವಪ್ಪ ಪಚ್ಚನಾಡಿ, ಅಜೀಜ್ ಬೈಕಂಪಾಡಿ, ಫೈಝಲ್ ಕೂಲೂರು, ಅಬೂಬಕರ್ಕೈರಂಗಳ ಮತ್ತಿತರರು ಇದ್ದರು.