ಅಧಿಕಾರವಾಸ.. ವನವಾಸ.. ಈಗ ಸನ್ಯಾಸ!
ಮಂಗಳೂರು: ಮೊದಲು ಅಧಿಕಾರವಾಸ..., ನಂತರ ವನವಾಸ..., ಮತ್ತೆ ರಾಜಕೀಯವಾಸ..., ಈಗ ರಾಜಕೀಯ ಸನ್ಯಾಸ...!
ಹೀಗೆ ಜೀವನದಲ್ಲಿ ವಿವಿಧ ಮಜಲುಗಳನ್ನು ಕಂಡ ಅಪರೂಪದ 'ರಾಜಕೀಯ ಭೀಷ್ಮ' ಉರಿಮಜಲು ಕೆ.ರಾಮಭಟ್. ಎರಡು ಬಾರಿ ಪುತ್ತೂರು ಶಾಸಕರಾಗಿ ರಾಜಕೀಯ ಸಹವಾಸ, ಕೆಲಸಮಯ ವನವಾಸದಲ್ಲಿದ್ದು, ಮತ್ತೆ ರಾಜಕೀಯಕ್ಕೆ ತೊಡಗಿ, ಕೊನೆಗೆ ರಾಜಕೀಯ ಸನ್ಯಾಸ ಸ್ವೀಕರಿಸಿರುವ ರಾಮಭಟ್ ಕ್ರಮಿಸಿದ ದಾರಿ ಎಲ್ಲರಂತಲ್ಲ.
57ರಲ್ಲಿ ಮೊದಲ ಸ್ಪರ್ಧೆ: ಪುತ್ತೂರು, ಸುಳ್ಯ ದ್ವಿಸದಸ್ಯ ಕ್ಷೇತ್ರವಾಗಿದ್ದಾಗ 1957ರಲ್ಲಿ ಪ್ರಥಮ ಬಾರಿಗೆ ಜನಸಂಘದಿಂದ ಸ್ಪರ್ಧಿಸಿದವರು ರಾಮಭಟ್. 1962ರಲ್ಲಿ ಸುಳ್ಯ ಪ್ರತ್ಯೇಕವಾದಾಗಲೂ ರಾಮಭಟ್ ಸ್ಪರ್ಧೆ. ಎರಡು ಬಾರಿಯೂ ಜನಸಂಘ ಮೂರನೇ ಸ್ಥಾನಕ್ಕೆ. 67 ಮತ್ತು 72ರಲ್ಲಿ ಸ್ಪರ್ಧಿಸಿದಾಗ ಎರಡನೇ ಸ್ಥಾನಕ್ಕೆ, ಕಾಂಗ್ರೆಸ್ಗೆ ನೇರ ಸ್ಪರ್ಧೆ ಒಡ್ಡಿದ್ದರು. ತುರ್ತು ಪರಿಸ್ಥಿತಿಯಲ್ಲಿ ಕೆಲ ಸಮಯ ಸೆರೆವಾಸದಲ್ಲಿದ್ದರು.
1978ರಲ್ಲಿ ಜನತಾ ಪಾರ್ಟಿಯಿಂದ ಸ್ಪರ್ಧಿಸಿದಾಗ ಅದೃಷ್ಟ ಖುಲಾಯಿಸಿತ್ತು. ಕಾಂಗ್ರೆಸ್ನ ಈಶ್ವರ ಭಟ್ (24,109 ಮತ) ಎದುರು ರಾಮಭಟ್(25,751 ಮತ) ಪ್ರಥಮ ಬಾರಿಗೆ ಗೆದ್ದರು. ಪುತ್ತೂರಲ್ಲಿ ಜನತಾ ಪಾರ್ಟಿಯ ಮೊದಲ ಖಾತೆ ತೆರೆದರು. 1983ರಲ್ಲಿ ಕಾಂಗ್ರೆಸ್ನ ಸಂಕಪ್ಪ ರೈ ವಿರುದ್ಧ ಸ್ಪರ್ಧಿಸಿ ಗೆಲವು ಪಡೆದರು. 1985ರಲ್ಲಿ ಕಾಂಗ್ರೆಸ್ನ ವಿನಯ ಕುಮಾರ್ ಸೊರಕೆ ವಿರುದ್ಧ ಸ್ಪರ್ಧಿಸಿ ಸೋತರು. ಅದೇ ವಿಧಾನಸಭೆಗೆ ಅವರ ಕೊನೆ ಸ್ಪರ್ಧೆ. ವಿಧಾನಸಭೆಗೆ ಒಟ್ಟು 7 ಬಾರಿ ಸ್ಪರ್ಧಿಸಿ 2 ಬಾರಿ ಮಾತ್ರ ಗೆಲವು ಕಂಡಿದ್ದರು. ನಂತರ 2008ರ ವರೆಗೆ ರಾಮಭಟ್ಟರದ್ದು 22 ವರ್ಷ ರಾಜಕೀಯ ವನವಾಸ.
2 ಬಾರಿ ಲೋಕಸಭೆಗೆ ಸ್ಪರ್ಧೆ: 1984ರಲ್ಲಿ ಮಂಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿದ್ದರು. ಇವರ ಎದುರಾಳಿ ಕಾಂಗ್ರೆಸ್ನ ಜನಾರ್ದನ ಪೂಜಾರಿ. ಜನಾರ್ದನ ಪೂಜಾರಿ 2,99,490 ಮತ ಪಡೆದರೆ, ರಾಮಭಟ್ಗೆ ಸಿಕ್ಕಿದ ಮತ 1,80,091. ಸೋಲಿನ ಅಂತರ 1,19,399 ಆಗಿತ್ತು. ಪುತ್ತೂರಲ್ಲಿ ವಿನಾ ಕಾರಣ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಗೆ ಟಿಕೆಟ್ ಕೊಡದ ಬಿಜೆಪಿ-ಸಂಘಪರಿವಾರದ ಧೋರಣೆ ವಿರೋಧಿಸಿ 2009ರಲ್ಲಿ ಬಿಜೆಪಿ ವಿರುದ್ಧವೇ ಪಕ್ಷೇತರರಾಗಿ ಸ್ಪರ್ಧಿಸಿ ಠೇವಣಿ ಕಳಕೊಂಡಿದ್ದರು. ಆಗ ಅವರಿಗೆ ದಕ್ಕಿದ ಮತ ಕೇವಲ 5,940. ಈ ಎರಡು ವರ್ಷ ಮತ್ತೆ ರಾಜಕೀಯವಾಸ ಅನುಭವಿಸಿದ್ದರು.
ರಾಜಕೀಯ ಸನ್ಯಾಸ: 2008ರಲ್ಲಿ ಶಕುಂತಳಾ ಶೆಟ್ಟಿ ಟಿಕೆಟ್ ನಿರಾಕರಣೆ ಪ್ರಕರಣದಲ್ಲಿ ಸ್ವಾಭಿಮಾನಿ ವೇದಿಕೆ ರಚಿಸಿಕೊಂಡು ಬಿಜೆಪಿ-ಸಂಘಪರಿವಾರವನ್ನು ಸರಿದಾರಿಗೆ ತರಲು ಪ್ರಯತ್ನಿಸಿ ಸೋತರು. ಬಳಿಕ ಬಿಜೆಪಿ ಹಿರಿಯ ವೇದಿಕೆಯಲ್ಲೂ ಜವಾಬ್ದಾರಿ ನಿರ್ವಹಿಸಿ ನಿರ್ಗಮಿಸಿದರು. ಕಳೆದ ವರ್ಷದಿಂದ ರಾಜಕೀಯ ಸನ್ಯಾಸ ತೆಗೆದುಕೊಂಡಿದ್ದಾರೆ ರಾಮಭಟ್ಟರು.
'ಬಿಜೆಪಿ ದೆಹಲಿ ಮಟ್ಟದಲ್ಲೇ ಸರಿಯಾಗುವ ಲಕ್ಷಣ ಇಲ್ಲ, ರಾಜ್ಯದಲ್ಲೂ ಭ್ರಷ್ಟಾಚಾರ ಆಪಾದನೆಯಲ್ಲಿ ಪಕ್ಷದ ವರ್ಚಸ್ಸು ಹಾಳಾಗಿದೆ. ಸಂಘ ಪರಿವಾರವೂ ಬಿಜೆಪಿ ವಿಚಾರದಲ್ಲಿ ಮೂಗು ತೂರಿಸುವುದು ನಿಂತಿಲ್ಲ. ಹಾಗಾಗಿ ನಾನು ನಿರ್ಲಿಪ್ತನಾಗಿದ್ದೇನೆ. ಜನಸಂಘ ಕಾಲದಿಂದಲೇ ಇಲ್ಲಿ ಪಕ್ಷವನ್ನು ಬೆಳೆಸಿದ ತೃಪ್ತಿ ತನಗಿದೆ' ಎನ್ನುತ್ತಾರೆ ರಾಮಭಟ್.
ಇವರು ಪಾಂಡವರಿಗೂ ಭಾವ, ಕೌರವರಿಗೂ...
ಅದೇನು ಸಂಬಂಧವೋ ಗೊತ್ತಿಲ್ಲ. ಬಿಜೆಪಿಯಿಂದ ಮುನಿದು ದೂರ ಇರುವ ಮಾಜಿ ಶಾಸಕ ಕೆ.ರಾಮಭಟ್ ಮನೆಗೆ ಬಿಜೆಪಿ ಮಾತ್ರವಲ್ಲ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಯೂ ಬಂದು ಆಶೀರ್ವಾದ ಪಡೆದು ಹೋಗುತ್ತಾರೆ. ಹಾಗಾಗಿ ಇವರು ಮಹಾಭಾರತದ ಕೃಷ್ಣನ ಪಾತ್ರವನ್ನು ನೆನಪಿಸುತ್ತಾರೆ.
ಮೊನ್ನೆ ಚುನಾವಣೆ ಘೋಷಣೆಯಾದ ಸಂದರ್ಭ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ರಾಜ್ಯಾಧ್ಯಕ್ಷ ಸ್ಥಾನವೂ ಸಿಗದೇ ಇದ್ದಾಗ ಡೀವಿ 3ನೇ ಬಾರಿಗೆ ಪುತ್ತೂರಲ್ಲಿ ಸ್ಪರ್ಧಿಸಲು ಮುಂದಾಗಿದ್ದರು. ತನ್ನ ಮನೆಯಲ್ಲಿ ಕಾರ್ಯಕರ್ತರ, ಮುಖಂಡರ ಸಭೆ ನಡೆಸಿದ ಡೀವಿ, ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ನೇರವಾಗಿ ತೆರಳಿದ್ದು ರಾಜಕೀಯ ಗುರು ರಾಮಭಟ್ಟರ ಮನೆಗೆ. ಚುನಾವಣೆಯಲ್ಲಿ ಸ್ಪರ್ಧಿಸಲು ಆಶೀರ್ವಾದ ಬೇಡಿದ್ದರು. ಗುರುವಿನಿಂದ ಸ್ಪರ್ಧೆಗೆ ಆಕ್ಷೇಪ ವ್ಯಕ್ತವಾದಾಗ ವಾಪಾಸ್ ಆಗಿದ್ದರು. ಬಿಜೆಪಿಯಿಂದ ಮುನಿಸಿ ಜೆಡಿಎಸ್ನಿಂದ ಕಣಕ್ಕಿಳಿದ ಸುಬ್ರಹ್ಮಣ್ಯದ ದಿನೇಶ್ ಕೂಡ ರಾಮ ಭಟ್ಟರನ್ನು ಮರೆಯಲಿಲ್ಲ. ಅವರೂ ರಾಮಭಟ್ಟರ ಮನೆಗೆ ತೆರಳಿ ಆಶೀರ್ವಾದ ಬೇಡಿದ್ದಾರೆ. ಬಳಿಕ ಶಕುಂತಳಾ ಶೆಟ್ಟಿ ಸರದಿ. ಕಾಂಗ್ರೆಸ್ ಸೇರಿದ ಸಂದರ್ಭ, ಟಿಕೆಟ್ ಸಿಕ್ಕಿದ ವೇಳೆ ರಾಮಭಟ್ಟರಲ್ಲಿಗೆ ಹೋಗಿ ಆಶೀರ್ವಾದ ಬೇಡಿದ್ದರು. ಅಂತೂ ಅಭ್ಯರ್ಥಿಗಳು ರಾಮಭಟ್ಟರ ಮನೆಗೆ ಎಡತಾಕುವುದು ತಪ್ಪುತ್ತಿಲ್ಲ.
- ಆತ್ಮಭೂಷಣ್