'ಕೊಲೆ ಪ್ರಕರಣ ಸಿಬಿಐಗೆ ವಹಿಸಿ'
ಮಂಗಳೂರು: ಬೆಂಗಳೂರಿನ ಸೈಂಟ್ ಪೀಟರ್ಸ್ ಪೊಂಟಿಫಿಸಿಯಲ್ ಸೆಮಿನರಿ ರೆಕ್ಟರ್ ಕೆ.ಜೆ. ಥೋಮಸ್ ಅವರ ಅಮಾನುಷ ಹತ್ಯೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ಒತ್ತಾಯಿಸಿದೆ.
ಥೋಮಸ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸೈಂಟ್ ಪೀಟರ್ಸ್ ಪೊಂಟಿಫಿಸಿಯಲ್ ಸೆಮಿನರಿ ರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಏ. 1ರಂದು ಮುಂಜಾನೆ ದುಷ್ಕರ್ಮಿಗಳು ಅವರ ಕೋಣೆಯಿಂದ ಹೊರ ಕರೆದು ಮುಖ, ತಲೆ ಹಾಗೂ ಶರೀರದ ಇತರ ಭಾಗಗಳಿಗೆ ವಸ್ತುವಿನಿಂದ ಹೊಡೆದು ಅಮಾನುಷವಾಗಿ ಕೊಲೆ ಮಾಡಿರುತ್ತಾರೆ. ಈ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಸಂಘದ ಅಧ್ಯಕ್ಷ ಎ.ಸಿ. ಜಯರಾಜ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಪರಾಧಿ ಯಾರಾಗಿದ್ದರೂ ಕಾನೂನು ರೀತಿಯ ಶಿಕ್ಷೆಗೊಳಪಡಿಸಬೇಕು. ಯಶವಂತಪುರದ ಪೊಲೀಸ್ ಠಾಣೆಯಿಂದ ಸೆಮಿನರಿಯು ಒಂದು ಕಿ.ಮೀ. ದೂರದಲ್ಲಿದೆ. ಈ ಸ್ಥಳವು ಬೆಂಗಳೂರಿನ ಪ್ರವೇಶ ರಸ್ತೆಯಾಗಿದ್ದು, ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಪೊಲೀಸರು ತನಿಖೆ ನಡೆಸಬಹುದಿತ್ತು. ಆದ್ದರಿಂದ ಕೊಲೆ ಪ್ರಕರಣವನ್ನು ಪೊಲೀಸರಿಂದ ಹಿಂದಕ್ಕೆ ಪಡೆದು ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲದಿದ್ದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.