ಡಿಸೆಂಬರ್ನಲ್ಲಿ 'ಭವಿಷ್ಯತ್ತಿಗಾಗಿ ಯೋಗ': ಡಾ.ಹೆಗ್ಗಡೆ
ಕ.ಪ್ರ.ವಾರ್ತೆ , ಮಂಗಳೂರು , ಏ. 24
ವಿವೇಕಾನಂದರ 150ನೇ ಜನ್ಮಶತಮಾನೋತ್ಸವ ಸಲುವಾಗಿ ನವೆಂಬರ್ ಅಥವಾ ಡಿಸೆಂಬರ್ನಲ್ಲಿ 4 ಜಿಲ್ಲೆಗಳ 10 ಕಡೆಗಳಲ್ಲಿ ಏಕಕಾಲಕ್ಕೆ 3 ಲಕ್ಷ ವಿದ್ಯಾರ್ಥಿಗಳನ್ನು ಒಂದೇ ರೀತಿಯ ಯೋಗ ಪ್ರದರ್ಶನ ನಡೆಸಿ ದಾಖಲೆ ನಿರ್ಮಿಸುವ ಕಾರ್ಯಕ್ರಮ ನಡೆಸಲಾಗುವುದು. ಇದಕ್ಕೆ 'ಭವಿಷ್ಯತ್ತಿಗಾಗಿ ಯೋಗ' ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಪೂರ್ವಸಿದ್ಧತೆ ನಡೆಯುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ಶಾಂತಿವನ ಟ್ರಸ್ಟ್, ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ಬುಧವಾರ ನಡೆದ 13ನೇ ರಾಜ್ಯ ಮಟ್ಟದ ಅಂಚೆ-ಕುಂಚ ಪುರಸ್ಕಾರ ಸಮಾರಂಭ ಮತ್ತು 22ನೇ ಬೃಹತ್ ಯೋಗ-ಆರೋಗ್ಯ ಶಿಬಿರ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ 16 ಜಿಲ್ಲೆಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ. 25 ಲಕ್ಷ ಸದಸ್ಯರಿದ್ದು, 2 ಸಾವಿರ ಕೋಟಿ ವ್ಯವಹಾರ ನಡೆದಿದೆ. ಮಂಗಳೂರು ತಾಲೂಕಲ್ಲಿ ಶೇ.ನೂರು ವ್ಯವಹಾರ ನಡೆಸಲಾಗಿದ್ದು, ಶೇ.ನೂರು ಮರುಪಾವತಿಯಾಗಿ, 125 ಕೋಟಿ ವ್ಯವಹಾರ ನಡೆಸಲಾಗಿದೆ. ಇದು ದಾಖಲೆಯಾಗಿದ್ದು, ಇತರರಿಗೆ ಮಾದರಿಯಾಗಿದೆ ಎಂದರು.
ಕೆಟ್ಟ ಹೆಸರು ಒಳ್ಳೇದಲ್ಲ: ಪ್ರೊ. ನಿಸಾರ್: ಧರ್ಮದ ಹೆಸರಲ್ಲಿ ಧರ್ಮಬಾಹಿರ ಕೃತ್ಯವೆಸಗಿ ಒಂದು ಸಮುದಾಯಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಸರಿಯಲ್ಲ ಎಂದು ಹಿರಿಯ ಕವಿ ಪ್ರೊ.ನಿಸಾರ್ ಅಹಮ್ಮದ್ ಹೇಳಿದರು. ಹಾಲು ಒಡೆಯುವುದಕ್ಕೆ ಹಸು ಕಾರಣವಲ್ಲ, ಹಾಲಿಗೆ ಸೇರಿದ ಕೆಟ್ಟ ಗುಣ ಕಾರಣ. ಹಸುವಿನ ಸ್ಥಾನದಲ್ಲಿರುವ ಸಮುದಾಯದ ದೂಷಣೆ ಮಾಡಬಾರದು. ಎಲ್ಲ ಧರ್ಮದ ತಿರುಳು ಒಂದೇ ಆಗಿದೆ. ಬಳಸುವ ಬಗೆ ವ್ಯತ್ಯಾಸವಾಗಿದೆ ಅಷ್ಟೇ ಎಂದರು.