ಮತಯಾಚನೆ ವೇಳೆ ಘರ್ಷಣೆ; ಶಾಸಕ ಅಂಗಾರ ವಿರುದ್ಧ ದೂರು
ಸುಳ್ಯ: ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಎಸ್. ಅಂಗಾರ ಮತ ಯಾಚನೆಗಾಗಿ ತಾಲೂಕಿನ ಬೇಂಗಮಲೆ ಕಾಲೋನಿಗೆ ತೆರಳಿದ ಸಂದರ್ಭ ಘರ್ಷಣೆ ನಡೆದು ಇತ್ತಂಡದಿಂದ ಪೊಲೀಸ್ ದೂರು ದಾಖಲಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಶಾಸಕ ಎಸ್. ಅಂಗಾರ, ಜಿಪಂ ಸದಸ್ಯ ನವೀನ್ ಕುಮಾರ್ ಮೇನಾಲ ಮೊದಲಾದ ನಾಯಕರು ಸ್ಥಳೀಯ ಮುಖಂಡರೊಂದಿಗೆ ಬೇಂಗಮಲೆ ಕಾಲೋನಿಗೆ ಮತ ಯಾಚನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರನ್ನು ತರಾಟೆಗೆ ತೆಗೆದುಕೊಂಡ ಕಾಲೋನಿ ನಿವಾಸಿಗಳು, 'ನಾವು ನಮ್ಮ ಬೇಡಿಕೆಗಳಿಗಾಗಿ ತಾಲೂಕು ಕಚೇರಿ ಎದುರು ಹೋರಾಟ ಮಾಡುತ್ತಿದ್ದಾಗ ನೀವು ಬಂದು ಕೇಳುವ ಸೌಜನ್ಯವನ್ನೂ ತೋರಿಲ್ಲ. ನಮ್ಮ ಮತ ಅಗತ್ಯವಿಲ್ಲ ಎಂದು ಹೇಳಿದ್ದೀರಿ. ಈಗ ಮತ ಕೇಳಲು ಬಂದದ್ದು ಯಾಕೆ' ಎಂದು ಪ್ರಶ್ನಿಸಿದ್ದಾರೆ. ತಾನು ಆ ರೀತಿ ಹೇಳಿಲ್ಲ. ತಮಿಳು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದು ಶಾಸಕರು ಸ್ಪಷ್ಟನೆ ನೀಡಿದಾಗ, 'ನೀವು ಹಾಗೆ ಹೇಳಿರುವುದಕ್ಕೆ ನಾವೇ ಸಾಕ್ಷಿ' ಎಂದು ಕೆಲವರು ಹೇಳಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದು ಇತ್ತಂಡಗಳೊಂದಿಗೆ ಮಾತಿನ ಚಕಮಕಿ ನಡೆದು ಘರ್ಷಣೆಯ ಹಂತ ತಲುಪಿ ಮತಯಾಚನೆ ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ಆಗಿದ್ದಾರೆ.
ಮತಯಾಚನೆಗೆ ತೆರಳಿದ ಸಂದರ್ಭ ಅಡ್ಡಿ ಪಡಿಸಲಾಗಿದೆ ಎಂದು ಚನಿಯಪ್ಪ ಎಂಬವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಮತಯಾಚನೆಗೆ ಬಂದವರು ತಮ್ಮ ಮೇಲೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದಾರೆ. ಇದಕ್ಕೆ ಶಾಸಕರು ಪ್ರೇರಣೆ ನೀಡಿದ್ದಾರೆಂದು ಕಾಲೋನಿಯ ಮಹಿಳೆಯರಾದ ದಿವ್ಯ, ಚಂದ್ರಕಾಂತಿ, ವಿಜಯಕುಮಾರಿ, ವಿಜಯಲಕ್ಷ್ಮಿ ಎಂಬವರು ಎಸ್. ಅಂಗಾರ, ನವೀನ್ ಕುಮಾರ್ ಮೇನಾಲ, ನವೀನ್ ಸಾರಕೆರೆ, ಗಣೇಶ್ ಕೊಚ್ಚಿ, ಕಿಶನ್ ಜಬಳೆ, ಮಹೇಶ್ ಜಬಳೆ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.
'ಕಾಂಗ್ರೆಸ್ನಿಂದ ಅನೈತಿಕ ರಾಜಕಾರಣ'
ಸುಳ್ಯ: ಕಾಲನಿಯಲ್ಲಿ ಮತಯಾಚನೆಗೆ ತೆರಳಿದ್ದ ಸಂದರ್ಭ ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಪಕ್ಷದವರು ದೂರು ನೀಡಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಬಿಜೆಪಿ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಎನ್.ಎ. ರಾಮಚಂದ್ರ ಸ್ಪಷ್ಟೀಕರಣ ನೀಡಿದ್ದಾರೆ. ಪಕ್ಷದ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಜ್ಜನ ರಾಜಕಾರಣಿಯಾಗಿರುವ ಅಂಗಾರ ಈ ಬಾರಿ ಸುಳ್ಯದಲ್ಲಿ ಗೆಲ್ಲುವುದು ನಿಶ್ಚಿತ. ಇದರಿಂದ ಹತಾಶರಾಗಿರುವ ಕಾಂಗ್ರೆಸ್ ನಾಯಕರು ವಾಮ ಮಾರ್ಗದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ತಮಿಳು ಮುಖಂಡ ಸುಂದರಲಿಂಗಂ ಮಾತನಾಡಿ, ಕಾರ್ಯಕರ್ತರು ಬೇಂಗಮಲೆ ಸಿಆರ್ ಕಾಲನಿಯಲ್ಲಿ ಮತಯಾಚಿಸುವ ಮನೆಯೊಂದರಲ್ಲಿ ಮಾತಿನ ಚಕಮಕಿ ನಡೆದಿರುವುದು ನಿಜ. ಆದರೆ ಈ ಸಂದರ್ಭದಲ್ಲಿ ಯಾವುದೇ ಮಹಿಳೆಯರು ಅಲ್ಲಿರಲಿಲ್ಲ. ನಂತರ ಶಾಸಕರು ಅಲ್ಲಿಂದ ತೆರಳಿ ವಾಹನದ ಬಳಿ ಬಂದಾಗ ಕಾಲನಿಯ ಕೆಲ ನಿವಾಸಿಗಳು ಜಲ್ಲಿಕಲ್ಲನ್ನು ಹಿಡಿದು ಶಾಸಕರಿಗಘಿ ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಕಾರ್ಯಕರ್ತರನ್ನು ಸಮಾಧಾನಪಡಿಸಿದ ಅಂಗಾರ ತೆರಳಿದ್ದಾರೆ ಎಂದರು.