ಯುಪಿಸಿಎಲ್ ಲಾಭ ಪಡೆದಿಲ್ಲ, ಪಡೆಯೊಲ್ಲ: ವಿಜಯಕುಮಾರ್
ಪಡುಬಿದ್ರಿ: ಕಾಪು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬಿ. ವಿಜಯಕುಮಾರ ಹೆಗ್ಡೆ ಬುಧವಾರದಿಂದ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಇದಕ್ಕೆ ಮೊದಲು ಅವರು ತಮ್ಮ ಬೆಂಬಲಿಗರೊಂದಿಗೆ ಇಲ್ಲಿನ ಕಾರಣಿಕ ಕ್ಷೇತ್ರವಾದ ಶ್ರೀಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ತೆರಳಿ, ತನ್ನ ಎದುರಾಳಿ ಅಭ್ಯರ್ಥಿಗಳು ಆರೋಪಿಸಿದಂತೆ, ತಾನು ಯುಪಿಸಿಎಲ್ ವಿದ್ಯುತ್ ಸ್ಥಾವರದಿಂದ ಲಾಭ ಪಡೆದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದರು, ಮುಂದೆಯೂ ಯುಪಿಸಿಎಲ್ ವಿರುದ್ಧದ ಹೋರಾಟವನ್ನು ಕೈಬಿಡುವುದಕ್ಕೆ ಅಂತಹ ಯಾವುದೇ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಮಾತ್ರವಲ್ಲ ಧೈರ್ಯವಿದ್ದರೇ ತನ್ನಂತೆ ಪ್ರತಿಜ್ಞೆ ಮಾಡುವಂತೆ ಕಾಪು ಕ್ಷೇತ್ರದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳಿಗೂ ಸಾರ್ವಜನಿಕವಾಗಿ ಸವಾಲು ಹಾಕಿದರು.
ನಾಗಾರ್ಜುನ- ಲ್ಯಾಂಕೋ ಕಂಪೆನಿಗಳ ಜಂಟಿ ಪ್ರಾಯೋಜಕತ್ವದ- ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆಯನ್ನು ವಿರೋಧಿಸಿದ್ದ ನಾಯಕರೆಲ್ಲರ ಮೇಲೆ ಹೊರಿಸಲಾದ ಸಾಮಾನ್ಯ ಆರೋಪ. ಅವರೆಲ್ಲರೂ ಈ ಕಂಪೆನಿಗಳಿಂದ ವಸೂಲಿ ಮಾಡುವುದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎನ್ನುವುದು. ಹೋರಾಟವನ್ನು ಅರ್ಧದಲ್ಲಿಯೇ ಕೈಬಿಟ್ಟ ವಿವಿಧ ಪಕ್ಷಗಳ ನಾಯಕರನ್ನು ನೋಡಿದಾಗ ಅದು ಹೌದು ಎನ್ನುವಂತಿದೆ. ಅಂತಹ ಆರೋಪ ಹೋರಾಟದ ಮುಂಚೂಣಿಯಲ್ಲಿರುವ ವಿಜಯಕುಮಾರ್ ಹೆಗ್ಡೆ ಮೇಲೆಯೂ ಆಗಾಗ ಕೇಳಿ ಬಂದಿತ್ತು.
ಇದೀಗ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಾನು ಶಾಸಕನಾಗಿ ಆರಿಸಲ್ಪಟ್ಟರೇ ಈ ಸ್ಥಾವರವನ್ನು ಮುಚ್ಚಿಸುವುದಾಗಿ ಹೇಳುತ್ತಿರುವ ವಿಜಯಕುಮಾರ್ ಹೆಗ್ಡೆ, ತಾನು ಇದುವರೆಗೆ ಈ ಕಂಪೆನಿಗಳಿಂದ ಒಂದು ಚಿಕ್ಕಾಸನ್ನೂ ಪಡೆದಿಲ್ಲ ಅಥವಾ ಮುಂದೆ ಪಡೆಯುವ ಉದ್ದೇಶದಿಂದಲೂ ಚುನಾವಣೆಗೆ ನಿಂತಿಲ್ಲ ಎಂದು ಖಡ್ಗೇಶ್ವರಿ ದೇವಿಯ ಮುಂದೆ ಪ್ರಮಾಣ ಮಾಡಿದರು.
ಚುನಾವಣಾ ನೀತಿ ಸಂಹಿತೆಯಿಂದಾಗಿ ತನ್ನ ಮೇಲೆ ಈ ಆರೋಪ ಮಾಡಿರುವ ಯಾರ ಹೆಸರನ್ನೂ ಹೇಳುತ್ತಿಲ್ಲ. ಚುನಾವಣೆಯ ಮುಗಿಯುತ್ತಿದ್ದಂತೆ ನಮ್ಮ ಮೇಲೆ ಈ ಸುಳ್ಳು ಆರೋಪ ಮಾಡಿದವರ ಹೆಸರನ್ನು ಬಹಿರಂಗ ಮಾಡುತ್ತೇನೆ ಎಂದು ಹೆಗ್ಡೆ ಹೇಳಿದರು.
ಪರಿಸರ, ಕೃಷಿಯನ್ನು ಉಳಿಸುವ, ಸೂರ್ಯನ ಬೆಳಕು, ಗಾಳಿ, ಸಮುದ್ರದ ಅಲೆ ಇತ್ಯಾದಿ ಪರ್ಯಾಯ ಮೂಲಗಳಿಂದ ಇಡೀ ರಾಜ್ಯಕ್ಕೆ ಬೇಕಾದ ಹಸಿರು ವಿದ್ಯುತನ್ನು ಉತ್ಪಾದಿಸುವ, ಸಣ್ಣಸಣ್ಣ ಪರಿಸರ ಸಹ್ಯ ಉದ್ದಿಮೆಗಳ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವ ಇತ್ಯಾದಿ ಯೋಜನೆಗಳು ತನ್ನ ಪ್ರಣಾಳಿಕೆಯಾಗಿವೆ ಎಂದವರು ಈ ಸಂದರ್ಭದಲ್ಲಿ ಹೇಳಿದರು.