ಶಕುಂತಳಾಗೆ ರೈತಸಂಘ ಹಸಿರುಸೇನೆ ಬೆಂಬಲ
ಪುತ್ತೂರು: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ಈ ಬಾರಿಯ ಚುನಾವಣೆಯಲ್ಲಿ ರೈತ ವಿರೋಧಿ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದು, ವ್ಯಕ್ತಿಪರ ಬೆಂಬಲ ನೀಡಲಿದೆ. ಈ ಹಿನ್ನಲೆಯಲ್ಲಿ ಸಂಘವು ಶಕುಂತಳಾ ಶೆಟ್ಟಿ ಅವರನ್ನು ಬೆಂಬಲಿಸಲಿದೆ ಎಂದು ಹಸಿರುಸೇನೆ ಪದಾಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ರೈತಸಂಘ ಹಸಿರುಸೇನೆ ರಾಜ್ಯ ಕಾರ್ಯದರ್ಶಿ ಸಿ. ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ರೈತ ಮತದಾರರು ಜಾಗೃತರಾಗಿ ರೈತಪರ ಕಾಳಜಿ ಹೊಂದಿರುವ ಮತ್ತು ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಬದ್ಧತೆ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಂಘವು ತೀರ್ಮಾನಿಸಿದೆ ಎಂದರು. ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ರೈತ ಸಂಘವು ನಡೆಸಿದ ರೈತಪರ ಹೋರಾಟ ಹತ್ತಿಕ್ಕುವಲ್ಲಿ ಪ್ರಸ್ತುತ ಪುತ್ತೂರಿನ ಬಿಜೆಪಿ ಅಭ್ಯರ್ಥಿ ನಮ್ಮ ಮೇಲೆ ಲಾಠಿ ಚಾರ್ಜ್ ನಡೆಸಲು ಪ್ರೇರಣೆ ನೀಡಿದ್ದರು. ಈ ಹಿನ್ನಲೆಯಲ್ಲಿ ವೈಯಕ್ತಿಕ ಬೆಂಬಲ ನೀಡಲು ತೀರ್ಮಾನಿಸಿರುವ ಸಂಘವು ಈ ಬಾರಿ ಶಕುಂತಳಾ ಶೆಟ್ಟಿಯನ್ನು ಬೆಂಬಲಿಸಲಿದೆ ಎಂದರು. ರೈತಸಂಘದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಮಡಿಲ, ಸವಣೂರು ವಲಯ ಅಧ್ಯಕ್ಷ ಇಡ್ಯಾಡಿ ಧರ್ಣಪ್ಪ ಗೌಡ, ರೈತ ಮುಖಂಡ ಹೊನ್ನಪ್ಪ ಗೌಡ ಇದ್ದರು.
ಆಧಾರ್ ಸಂಖ್ಯೆ ಕಡ್ಡಾಯಕ್ಕೆ ಖಂಡನೆ
ಮಂಗಳೂರು: ಬೀಡಿ ಕಾರ್ಮಿಕರ ಮಕ್ಕಳಿಗೆ ಕಲ್ಯಾಣ ನಿಧಿ ನೀಡುವ ವಿದ್ಯಾರ್ಥಿ ವೇತನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು 'ಆಧಾರ್' ಸಂಖ್ಯೆ ಹೊಂದಿರಬೇಕು ಎಂಬ ಕೇಂದ್ರ ಕಾರ್ಮಿಕ ಸಚಿವಾಲಯ ಆದೇಶವನ್ನು ಆಲ್ ಇಂಡಿಯಾ ಬೀಡಿ ವರ್ಕರ್ಸ್ ಫೆಡರೇಶನ್ ಖಂಡಿಸಿದೆ. 2013-14ನೇ ಸಾಲಿನ ಸಂಬಂಧಪಟ್ಟ ವಿದ್ಯಾರ್ಥಿಗಳು ಯುಐಡಿ ಆಧಾರಿತ ಆಧಾರ್ ಸಂಖ್ಯೆ ಹೊಂದಿರಬೇಕು ಎಂದು ತಿಳಿಸಿದೆ. ಆದರೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನೀಲೇಕಣಿ ಹೇಳಿದಂತೆ ಈ ತನಕ ದೇಶದ ಜನಸಂಖ್ಯೆಯ ಮೂರನೇ ಒಂದರಷ್ಟು ಮಂದಿಗೆ ಆಧಾರ್ ಕಾರ್ಡ್ ವಿತರಣೆಯಾಗಿದೆ. ಆಧಾರ್ ವಿತರಿಸಲು ಇನ್ನೂ ಕೆಲವು ವರ್ಷಗಳೇ ಬೇಕು ಎಂದಿದ್ದಾರೆ. ಹೀಗಿರುವಾಗ ಬಡ ಬೀಡಿ ಕಾರ್ಮಿಕರ ಮಕ್ಕಳಿಂದ ಆಧಾರ್ ಸಂಖ್ಯೆ ಅಗತ್ಯವಿದೆ ಎಂದಿರುವ ಕೇಂದ್ರ ಸರ್ಕಾರದ ನಿರ್ದೇಶನ ಅನ್ಯಾಯದ ಪರಮಾವಧಿಯಾಗಿದೆ. ತಕ್ಷಣ ಆದೇಶ ಹಿಂಪಡೆಯುವಂತೆ ಫೆಡರೇಶನ್ ಅಧ್ಯಕ್ಷ ಬಿ. ಮಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರ್ಶ ರೈಲು ನಿಲ್ದಾಣ ಕಾಮಗಾರಿಗೆ ಸಿದ್ಧ
ಮಂಗಳೂರು: ಪುತ್ತೂರು ಆದರ್ಶ ರೈಲು ನಿಲ್ದಾಣದ ಮೊದಲ ಹಂತದ ಕಾಮಗಾರಿಗೆ ರು. 35 ಲಕ್ಷ ವೆಚ್ಚದ ನೀಲಿನಕಾಶೆ ಸಿದ್ಧಗೊಂಡಿದೆ ಎಂದು ಮೈಸೂರಿನಲ್ಲಿ ಮಂಗಳವಾರ ಜರುಗಿದ ಮೈಸೂರು ವಿಭಾಗೀಯ ರೇಲ್ವೆ ಸಲಹಾ ಸಮಿತಿ ಸಭೆಯಲ್ಲಿ ಸದಸ್ಯ ಸುದರ್ಶನ್ ಕೇಳಿದ ಪ್ರಶ್ನೆಗೆ ರೇಲ್ವೆ ವಿಭಾಗೀಯ ಮೆನೇಜರ್ ವಿನೋದ್ ಕುಮಾರ್ ಉತ್ತರಿಸಿದ್ದಾರೆ. ಸುಬ್ರಹ್ಮಣ್ಯ ಮಾರ್ಗ ರೈಲು ನಿಲ್ದಾಣದಲ್ಲಿ ಯಾವುದೇ ಎಕ್ಸ್‌ಪ್ರೆಸ್ ರೈಲುಗಳು ಬಂದು ಹೋಗುವುದಕ್ಕೆ ಅವಕಾಶವಿದೆ. ಪ್ಯಾಸೆಂಜರ್ ರೈಲು ತಂಗುವುದಕ್ಕೆ ಅನುಕೂಲ ಕಲ್ಪಿಸುವುದರೊಂದಿಗೆ ಮೀಟರ್‌ಗೇಜ್ ಕಾಲದಲ್ಲಿದ್ದ ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ವರೆಗೆ ವಿಸ್ತರಿಸಿ ರಾತ್ರಿ ತಂಗುವುದಕ್ಕೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ಕಬಕ-ಪುತ್ತೂರು ನಿಲ್ದಾಣದ ತಾತ್ಕಾಲಿಕ ಫ್ಲ್ಯಾಟ್‌ಫಾರಂ ವಿಸ್ತರಣೆಯನ್ನು ಸಕ್ರಮಗೊಳಿಸುವ ಭರವಸೆ ಕೂಡ ಸಿಕ್ಕಿದೆ. ಜತೆಗೆ ನೇರಳಕಟ್ಟೆ ಗೂಡ್ಸ್ ರೈಲು ನಿಲ್ದಾಣದಲ್ಲಿ ಇನ್ನು ಕೆಲವೇ ಸಮಯದಲ್ಲಿ ಪ್ಯಾಸೆಂಜರ್ ರೈಲಿಗೆ ನಿಲುಗಡೆ ಕಲ್ಪಿಸುವುದಾಗಿ ಹೇಳಿದರು. ಏ.25ರಂದು ಡಿಆರ್‌ಎಂ ವಿನೋದ್ ಕುಮಾರ್ ಕಬಕ ಪುತ್ತೂರು, ಸುಬ್ರಹ್ಮಣ್ಯ ಮಾರ್ಗ ರೇಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವರು ಎಂದು ಸದಸ್ಯ ಸುದರ್ಶನ್ ತಿಳಿಸಿದ್ದಾರೆ.