ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಆಪರೇಶನ್ ಕಮಲ ಬಿಜೆಪಿ ದುಷ್ಕೃತ್ಯ

Rashmi Kasaragodu
Updated On : 26 Apr 2013, 11:25 am

ಬಂಟ್ವಾಳ: ರಾಜಕೀಯದಲ್ಲಿ ಆಪರೇಷನ್ ಕಮಲದಂತಹಾ ಭ್ರಷ್ಟ ವ್ಯವಸ್ಥೆಯನ್ನು ಆರಂಭಿಸುವ ಮೂಲಕ ಬಿಜೆಪಿ ಬಹುದೊಡ್ಡ ದುಷ್ಕೃತ್ಯವೆಸಗಿದೆ ಎಂದು ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ರಮಾನಾಥ ರೈ ಹೇಳಿದ್ದಾರೆ.
ಕಡೇಶ್ವಾಲ್ಯ ಗ್ರಾಮದ ಪೆರ್ಲಾಪಿನಲ್ಲಿ ಗುರುವಾರ ಸಂಜೆ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಕಾರ್ಯಕರ್ತರನ್ನು, ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ರಾಜ ವ್ಯಾಪಾರಿಯಾದರೆ ಪ್ರಜೆ ಭಿಕಾರಿಯಾಗುತ್ತಾನೆ ಎಂಬ ಮಾತಿನಂತೆ ಗಣಿ- ಭೂಮಿ ಮಾರಾಟ ಮಾಡುವ ಬಿಜೆಪಿಯವರ ಕೈಗೆ ಅಧಿಕಾರ ಕೊಟ್ಟ ಕಾರಣಕ್ಕೆ ರಾಜ್ಯದ ಜನತೆ ಕಷ್ಟಪಡುವಂತಾಗಿದೆ. ಡಜನ್‌ಗಟ್ಟಲೆ ಮಂತ್ರಿಗಳು ಸರತಿಸಾಲಿನಲ್ಲಿ ಜೈಲಿಗೆ ಹೋಗಿರುವುದು ಬಿಜೆಪಿಯ ಸಾಧನೆ ಎಂದು ರೈ ವ್ಯಂಗ್ಯವಾಡಿದರು.
ತಪ್ಪು ಮಾಡಿದವರಿಗೆ ಈ ಬಾರಿ ಅವಕಾಶ ಕೊಡುವುದಿಲ್ಲ ಎಂದಿದ್ದ ಬಿಜೆಪಿ, ವಿಧಾನ ಸೌಧದೊಳಗೆ ನೀಲಿ ಚಿತ್ರ ನೋಡಿದವರಿಗೆ ಟಿಕೆಟ್ ಕೊಟ್ಟಿದೆ. ಈಶ್ವರಪ್ಪ ರವರೇ ನಿಮ್ಮ ಪ್ರಕಾರ ಇಂತಹಾ ಕೆಟ್ಟ ಕೃತ್ಯ ಎಸಗಿದವರೆಲ್ಲಾ ಒಳ್ಳೆಯವರೇ ಎಂದು ರೈ ಪ್ರಶ್ನಿಸಿದರು.
ಬೊಮ್ಮಾಯಿ, ಜೆ.ಎಚ್. ಪಟೇಲ್, ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿಯಾಗಿದ್ದಾಗಲೂ ನಾನು ಬಂಟ್ವಾಳ ಕ್ಷೇತ್ರದ ಶಾಸಕನಾಗಿದ್ದೆ. ಆದರೆ ಆಗಿನ ಸರ್ಕಾರ ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ತನ್ನ ಕನಸಿನ ಕ್ಷೇತ್ರ ಅಭಿವೃದ್ದಿಯ ಹಲವು ಯೋಜನೆಗಳಿಗೆ ಅಡ್ಡಗಾಲು ಹಾಕಿದೆ ಎಂದು ಆರೋಪಿಸಿದ ಅವರು, ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಬಂಟ್ವಾಳ ಕ್ಷೇತ್ರದ ಶಾಸಕನಾಗಿ ತನ್ನನ್ನು ಆಯ್ಕೆ ಮಾಡುವಂತೆ ವಿನಂತಿಸಿದರು.
ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಹಾಗೂ ಬಿಜೆಪಿ ಸರ್ಕಾರ ನಡೆಸಿದ ಅನಾಚಾರಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು ಒಬ್ಬ ಹೆಣ್ಣಾಗಿ ತನಗೆ ನಾಚಿಕೆಯಾಗುತ್ತಿದೆ ಎಂದರು. ಜೆಡಿಎಸ್‌ನ ವಚನ ಭ್ರಷ್ಟತೆಯನ್ನು ಕಾರಣವಾಗಿ ಮುಂದಿರಿಸಿಕೊಂಡು ಅಧಿಕಾರಕ್ಕೇರಿದ ಬಿಜೆಪಿ, ತನ್ನ ಆಡಳಿತದಲ್ಲಿ ಜನತೆಗೆ ಕೊಟ್ಟ ವಚನ ಮರೆತು ಮತದಾರರಿಗೆ ದ್ರೋಹವೆಸಗಿದೆ. ಕಾಂಗ್ರೆಸ್ ಅನ್ನು ಜನತೆ ಬೆಂಬಲಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸುವಂತೆ ಅವರು ವಿನಂತಿಸಿದರು. ಕಾಂಗ್ರೆಸ್‌ನ ಜಿಲ್ಲಾ ವೀಕ್ಷಕ ಶಾಹುಲ್ ಹಮೀದ್ ಮಾತನಾಡಿ, ಮೂರು ದಶಕಕ್ಕಿಂತಲೂ ಅಧಿಕ ರಾಜಕೀಯ ಅನುಭವವಿದ್ದು, ಕ್ಷೇತ್ರದ ಜನತೆಯ ನಾಡಿಮಿಡಿತವನ್ನು ಅರಿತಿರುವ ಕಾಂಗ್ರೆಸ್‌ನ ರಮಾನಾಥ ರೈಯವರ ವಿರುದ್ಧ, ಬಿಜೆಪಿ ಕೇವಲ 4 ತಿಂಗಳಿನಿಂದ ಕ್ರಿಕೆಟ್ ಪಂದ್ಯಾವಳಿ ಹಾಗೂ ಸಣ್ಣಪುಟ್ಟ ಸಭೆಗಳಿಗೆ ಹೋದ ಅನುಭವವಿರುವವರನ್ನು ನಿಲ್ಲಿಸಿದ್ದಾರೆ ಎಂದರು. ಪಕ್ಷದ ಪ್ರಮುಖರಾದ ಎ.ಸಿ. ಭಂಡಾರಿ, ಹರಿಕೃಷ್ಣ ಬಂಟ್ವಾಳ, ಕೃಪಾ ಆಳ್ವ, ಚಂದ್ರಪ್ರಕಾಶ್ ಶೆಟ್ಟಿ, ಅಬ್ಬಾಸ್ ಆಲಿ, ಇದಿನಬ್ಬ ಕಲ್ಲಡ್ಕ, ಪದ್ಮನಾಭ ರೈ, ಸದಾಶಿವ ಬಂಗೇರ ಹಾಗೂ ಸ್ಥಳೀಯ ಕಾಂಗ್ರೆಸ್ ಪ್ರಮುಖರು  ವೇದಿಕೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement