ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉರುವಲು ಕಟ್ಟು ಬಿದ್ದು ಯುವಕ ಸಾವು

Rashmi Kasaragodu
Updated On : 26 Apr 2013, 11:28 am

ಸುಳ್ಯ: ಉರುವಲು ಕಟ್ಟು ಮೈಮೇಲೆ ಬಿದ್ದು ಯುವಕ ಮೃತಪಟ್ಟ ಘಟನೆ ಏನೆಕಲ್ಲಿನಲ್ಲಿ ನಡೆದಿದೆ. ಏನೆಕಲ್ಲು ಗ್ರಾಮದ ನೇರಳಗದ್ದೆಯಲ್ಲಿ ಹರೀಶ್ ನಾಯ್ಕ(27) ಏ. 17ರಂದು ಮಾಣಿಬೈಲು ಕೃಷ್ಣ ನಾಯ್ಕರ ಮನೆಗೆ ಕಟ್ಟಿಗೆ ಹೊತ್ತೊಯ್ಯುತ್ತಿದ್ದಾಗ ದಾರಿಯಲ್ಲಿ ಜಾರಿ ಎಡವಿ ಬಿದ್ದ ಪರಿಣಾಮ ಕಟ್ಟಿಗೆ ಮೈಮೇಲೆ ಬಿದ್ದು ತಲೆ ಮತ್ತು ಕೈಕಾಲುಗಳಿಗೆ ತೀವ್ರ ಗಾಯಗೊಂಡರು. ಅವರನ್ನು  ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ಆತ್ಮಹತ್ಯೆ
ಪುತ್ತೂರು: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ಪುತ್ತೂರು ನಗರದ ಹೊರವಲಯದ ಉರ್ಲಾಂಡಿ ಎಂಬಲ್ಲಿ ನಡೆದಿದೆ. ಬೊಳುವಾರು ಉರ್ಲಾಂಡಿ ನಿವಾಸಿ ದಿ.ಸ್ಟ್ಯಾನಿ ಡಿ'ಸೋಜ ಪುತ್ರ ಸನಿಲ್ ಡಿ'ಸೋಜ(40) ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ. ತನ್ನ ಮನೆಯಲ್ಲಿನ ಬಡ್‌ರೂಂ ಛಾವಣಿಗೆ ನೇಣು ಬಿಗಿದು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ರೈಲಿನಡಿಗೆ ಬಿದ್ದು ಮೃತ್ಯು
ಪುತ್ತೂರು: ರೈಲಿನಡಿಗೆ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಬುಧವಾರ ರಾತ್ರಿ ಪುತ್ತೂರು ತಾಲೂಕಿನ ಕಾಣಿಯೂರು ಗ್ರಾಮದ ಏಲಡ್ಕ ಎಂಬಲ್ಲಿ ನಡೆದಿದೆ.
ಕಾಣಿಯೂರು ಗ್ರಾಮದ ನಾವೂರು ಏಲಡ್ಕ ನಿವಾಸಿ ದಿ.ವೆಂಕಪ್ಪ ಗೌಡ ಎಂಬವರ ಪುತ್ರ ಜಯರಾಮ ಗೌಡ (55) ಮೃತ ವ್ಯಕ್ತಿ. ಜಯರಾಮ ಗೌಡ ಸಂಜೆ ವೇಳೆ ತನ್ನ ಮನೆಯಿಂದ ಹೊರ ಹೋಗಿದ್ದು ರಾತ್ರಿ ವೇಳೆ ಹಿಂತಿರುಗಿ ಬರುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.  ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ವಿಟ್ಲ: ನೆಂಟರ ಮನೆಯಲ್ಲಿ ವಾಸವಾಗಿದ್ದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರುಳಿಮೂಲೆಯಲ್ಲಿ ಗುರುವಾರ ಬೆಳಕಿಗೆ ಬಂದಿದೆ. ಸಜಿಪ ಮೂಲದ ಲೋಕಯ್ಯ (55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೆಂದು ಗುರುತಿಸಲಾಗಿದೆ.  ಈತನಿಗೆ ಮದುವೆಯಾಗಿದ್ದು ಪತ್ನಿಯ ಜೊತೆಗಿನ ವೈಮನಸ್ಸಿನಿಂದ ಮನೆ ಬಿಟ್ಟು ಸುರುಳಿಮೂಲೆಯಲ್ಲಿರುವ ಅತ್ತಿಗೆ ಮನೆಯಲ್ಲಿ ವಾಸವಾಗಿದ್ದರು. ಏ.22ರಂದು ಬೇರೆಡೆ ಹೋಗಿಬರುವುದಾಗಿ ಹೇಳಿ ಹೋದ ವ್ಯಕ್ತಿ ಮತ್ತೆ ಹಿಂತಿರುಗಿ ಬರದೆ ನಾಪತ್ತೆಯಾಗಿದ್ದು ಗುರುವಾರ, ಮನೆ ಪಕ್ಕದ ಗುಡ್ಡದಲ್ಲಿ ಉಟ್ಟ ಪಂಚೆಯಲ್ಲೇ ನೇಣು ಹಾಕಿಕೊಂಡ ಪರಿಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ದೇಹ ಕೊಳೆತ ಸ್ಥಿತಿಯಲ್ಲಿದ್ದುದರಿಂದ ಘಟನೆ ಸಂಭವಿಸಿ 2ರಿಂದ ಮೂರು ದಿನಗಳಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಗೆ ಅಸೌಖ್ಯವಿದ್ದುದೇ ಘಟನೆಗೆ ಕಾರಣ ಎನ್ನಲಾಗಿದೆ.  ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಉರುಳಿ ಇಬ್ಬರಿಗೆ ಗಾಯ
ಬಂಟ್ವಾಳ: ಚಾಲಕನ ಹತೋಟಿ ತಪ್ಪಿದ ಓಮ್ನಿ ಕಾರೊಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾ.ಹೆ. 75 ರ ಪಾಣೆಮಂಗಳೂರಿನಲ್ಲಿ ಗುರುವಾರ ರಾತ್ರಿ ನಡೆದಿದೆ. ಗಾಯಗೊಂಡವರ ಪೈಕಿ ಒಬ್ಬರನ್ನು ಸ್ಥಳೀಯ ನಿವಾಸಿ ನಾರಾಯಣ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದು, ಕಾರು ಚಾಲಕನಿಗೂ ತೀವ್ರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿನಿಯರಿಗೆ ಕಿರುಕುಳ: ಪ್ರತಿಭಟನೆ
ಮಂಗಳೂರು: ಬೆಂಗಳೂರಿನ ವಂಡರ್ ಲಾ ಪ್ರವಾಸ ಹೋಗಿದ್ದ ವೇಳೆ ಉಪನ್ಯಾಸಕನೊಬ್ಬ ವಿದ್ಯಾಥಿನಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿ ಭಟನೆ ನಡೆಸಿದರು.   ಪ್ರವಾಸ ತೆರಳಿದ್ದ ವೇಳೆ ವಿದ್ಯಾರ್ಥಿನಿಯರ ಜತೆ ಅಶ್ಲೀಲವಾಗಿ ವರ್ತಿಸಿದ್ದು, ಉಪನ್ಯಾಸಕನನ್ನು ಅಮಾನತುಗೊಳಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಸೂಕ್ತ ಕ್ರಮದ ಬಗ್ಗೆ ಪ್ರಾಂಶುಪಾಲರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂದೆಗೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement