ಕ್ಯಾನ್ಸರ್ ಚಿಕಿತ್ಸೆಗೆ ವಿಮೆ ಒದಗಿಸಿ: ಡಾ. ಹೆಗ್ಗಡೆ
ಮಂಗಳೂರು: ಕಾನ್ಸರ್ ಚಿಕಿತ್ಸೆಗೂ ವಿಮಾ ಕಂಪನಿಗಳು ವಿಮೆ ನೀಡಲು ಮುಂದಾಗಬೇಕು ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಬುಧವಾರ ಎಜೆ ಆಸ್ಪತ್ರೆಯಲ್ಲಿ 'ಎಜೆ ಕಾನ್ಸರ್ ಇನ್‌ಸ್ಟಿಟ್ಯೂಟ್' ಉದ್ಘಾಟಿಸಿ ಮಾತನಾಡಿದರು. ಇಂದು ಆಧುನಿಕ ತಂತ್ರಜ್ಞಾನದ ಮೂಲಕ ಚಿಕಿತ್ಸೆಗೆ ವ್ಯವಸ್ಥೆಯಿದ್ದರೂ, ಜನಸಾಮಾನ್ಯರಿಗೆ ಇದು ಎಟುಕುತ್ತಿಲ್ಲ. ವಿಮಾ ಕಂಪನಿಗಳು ಇವುಗಳ ಕುರಿತು ಚಿಂತಿಸುವ ಅಗತ್ಯವಿದೆ ಎಂದರು. ಗುಣಮಟ್ಟದ ಉತ್ತಮ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಮೂಲಕ ಅಧ್ಯಯನ ನಡೆಸುವ ವಿದ್ಯಾರ್ಥಿಗಳ ಶಿಕ್ಷಣಮಟ್ಟವೂ ಉತ್ತಮವಾಗಿರುತ್ತದೆ. ಇದಲ್ಲದೆ ವೈದ್ಯರೂ ಪ್ರಾಯೋಗಿಕ ಅನುಭವ ಪಡೆಯುವರು ಎಂದರು. ಎಜೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಎಸ್. ಶ್ರೀಪ್ರಕಾಶ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಕಾರ್ಪೊರೇಶನ್ ಬ್ಯಾಂಕಿನ ಆಡಳಿತ ನಿರ್ದೇಶಕ ಅಜಯ್ ಕುಮಾರ್, ಕಲ್ಲಿಕೋಟೆ ಮಲಬಾರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಕೆ. ಕಾರ್ತಿಕೇಯ ವರ್ಮಾ ಇದ್ದರು.