ದೊಡ್ಡತೋಟ, ಕುಂಟಿಕಾನದಲ್ಲಿ ಚುನಾವಣೆ ಬಹಿಷ್ಕಾರ ಬ್ಯಾನರ್
ಸುಳ್ಯ: ಕುಂಟಿಕಾನ, ದೊಡ್ಡತೋಟದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಪ್ರತ್ಯಕ್ಷಗೊಂಡಿದೆ.
ಅಮರಮುಡ್ನೂರು ಗ್ರಾಮದ ಕುಂಟಿಕಾನ- ಮರ್ಗಿಲಡ್ಕ ರಸ್ತೆ 3 ಕಿ.ಮೀ. ದೂರ ಇದ್ದು, 2011ರಲ್ಲಿ ಮುಖ್ಯಮಂತ್ರಿ ಸಡಕ್ ಯೋಜನೆಯಿಂದ ಈ ರಸ್ತೆಗೆ ಡಾಂಬರೀಕರಣ ಮಾಡಲು ಅನುದಾನ ಬಿಡುಗಡೆಗೊಂಡಿದೆ. ಆದರೆ ಕುಂಟಿಕಾನ ಎಂಬಲ್ಲಿ ಸುಮಾರು 200 ಮೀ.ನಷ್ಟು ರಸ್ತೆಯು ಖಾಸಗಿ ವ್ಯಕ್ತಿಯೋಬ್ಬರ ಪಟ್ಟಾಸ್ಥಳವಾಗಿದ್ದು, ಈಗ ಅದು ಕೋರ್ಟ್ ಕೇಸ್ನಲ್ಲಿದೆ. ಸುಮಾರು 200 ಮೀ.ನಷ್ಟು ಡಾಂಬರೀಕರಣಕ್ಕೆ ಬಾಕಿ ಇದ್ದು ಉಳಿದ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಹಾದು ಹೋಗುವ ವಾಹನ, ಶಾಲಾಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ನಡೆದುಕೊಂಡು ಹೋಗಲು ಕೂಡಾ ತುಂಬಾ ಕಷ್ಟ.ಈ ಸಮಸ್ಯೆಗೆ ಯಾವುದೇ ಪಕ್ಷ ಸ್ಪಂದಿಸದ ಕಾರಣ ಅಲ್ಲಿನ ನಾಗರಿಕರು ಸೇರಿ ಚುನಾವಣಾ ಬಹಿಷ್ಕಾರದ ಬ್ಯಾನರನ್ನು ಕುಂಟಿಕಾನ ಹಾಗೂ ದೊಡ್ಡತೋಟದಲ್ಲಿ ಅಳವಡಿಸಿದ್ದಾರೆ.
ಕುಂಟಿಕಾನ ಎಂಬಲ್ಲಿ ರಸ್ತೆ ಸರಿಪಡಿಸುವ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳು ಈವರೆಗೆ ಸ್ಪಂದಿಸದ ಕಾರಣ ನೆಲ್ಲಿಕುಂಟ, ನಂದಗೋಕುಲ, ಮೈಕಾಪಳ್ಳ, ಕೋಣಕಜೆ ನಾಗರಿಕರಿಂದ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದೆಂದು ನಿರ್ಧರಿಸಲಾಗಿದೆ ಎಂದು ಬ್ಯಾನರ್ ಹಾಕಲಾಗಿದೆ.