ಪತ್ನಿ ಕಾಂಗ್ರೆಸ್ ಸೇರಿದ ತಪ್ಪಿಗೆ ಪತಿಗೆ ಹಲ್ಲೆ!
ಪುತ್ತೂರು: ಪತ್ನಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವುದನ್ನು ಪ್ರಶ್ನಿಸಿ ಪತಿಗೆ ಸಂಘಟನೆಯ ಪದಾಧಿಕಾರಿಯೊಬ್ಬ ಸೇರಿದಂತೆ ಇಬ್ಬರು ಹಲ್ಲೆ ನಡೆಸಿದ ಘಟನೆ ಪುತ್ತೂರು ನಗರದ ಪಡೀಲು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಬನ್ನೂರು ಜೈನರಗುರಿ ನಿವಾಸಿ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ವೀರರಾಜು ಅರಸ್ (39) ಹಲ್ಲೆಗೊಳಗಾದ ವ್ಯಕ್ತಿ. ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘ (ಬಿಎಂಎಸ್) ಕಾರ್ಯದರ್ಶಿ, ಕೆಎಸ್‌ಆರ್‌ಟಿಸಿ ನೌಕರ ಶಾಂತಾರಾಮ ವಿಟ್ಲ ಮತ್ತು ತಿಮ್ಮಪ್ಪ ಪೂಜಾರಿ ಎಂಬವರು ಹಲ್ಲೆ ನಡೆಸಿದ ಆರೋಪಿಗಳು.
ಯಾಕೆ ನಡೆಯಿತು ಹಲ್ಲೆ?: ವೀರರಾಜು ಅರಸ್ ಪತ್ನಿ ಶಾರದಾ ಇತ್ತೀಚೆಗೆ ಶಕುಂತಳಾ ಶೆಟ್ಟಿ ನಾಮಪತ್ರ ಸಲ್ಲಿಸುವ ಸಂದರ್ಭ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈ ಕಾರಣಕ್ಕಾಗಿ ಹಲ್ಲೆ ನಡೆದಿದೆ ಎನ್ನಲಾಗಿದೆ. ಹಲ್ಲೆಗೊಳಗಾದ ವೀರರಾಜು ಅರಸ್ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅರಸ್ ಹೇಳಿದ್ದು...: ತಾನು ಬುಧವಾರ ರಾತ್ರಿ ಪಡೀಲಿನ ಸೆಲೂನ್ ಒಂದರಲ್ಲಿ ತಲೆ ಕೂದಲು ತೆಗಿಸಿ ತನ್ನ ಬೈಕ್ ಸ್ಟಾರ್ಟ್ ಮಾಡಿ ಹೋರಡುವಾಗ ಅಲ್ಲಿಗೆ ಆಗಮಿಸಿದ ಶಾಂತರಾಮ್ ಎಂಬವರು, 'ನಿನ್ನ ಪತ್ನಿ ಶಾರದಾ ಕಾಂಗ್ರೆಸ್‌ಗೆ ಏಕೆ ಸೇರಿದ್ದು' ಎಂದು ಗದರಿಸಿ ಹಲ್ಲೆ ನಡೆಸಿದರು. ಇದೇ ವೇಳೆ ಅವರೊಂದಿಗಿದ್ದ ತಿಮ್ಮಪ್ಪ ಪೂಜಾರಿ ಎಂಬವರು ತನ್ನ ಶರ್ಟ್‌ನ ಕಾಲರ್ ಹಿಡಿದು ಎಳೆದು ದೂಡಿ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.