ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಾನವ ಕಳ್ಳ ಸಾಗಾಟ ಜಾಲ: 70ಕ್ಕೂ ಹೆಚ್ಚು ಮಂದಿ ರಕ್ಷಣೆ

Rashmi Kasaragodu
Updated On : 26 Apr 2013, 11:27 am

ಮಂಗಳೂರು: ತಮಿಳುನಾಡಿನ ಶ್ರೀಲಂಕಾ ನಿರಾಶ್ರಿತರನ್ನು ಮಂಗಳೂರು ಕಡಲು ಮೂಲಕ ಅಸ್ಟ್ರೇಲಿಯಾಕ್ಕೆ ಕಳ್ಳ ಸಾಗಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಭೇದಿಸಿದ ಪೊಲೀಸರು, 70ಕ್ಕೂ ಹೆಚ್ಚುಮಂದಿಯನ್ನು ರಕ್ಷಿಸಿದ್ದಾರೆ. ಇದರಲ್ಲಿ 10ಕ್ಕೂ ಹೆಚ್ಚು ಮಕ್ಕಳು, ಮಹಿಳೆಯರೂ ಇದ್ದಾರೆ. 5 ಮಂದಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
 ಪ್ರಯಾಣಕ್ಕೆ ಸಿದ್ಧಗೊಳಿಸಲಾಗಿದ್ದು ಬೋಟ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
 ಸಿಸಿಬಿ ಇನ್‌ಸ್ಪೆಕ್ಟರ್ ಡಾ.ಎಚ್.ಎನ್. ವೆಂಕಟೇಶ್ ಪ್ರಸನ್ನ, ಕರಾವಳಿ ಕಾವಲು ಪಡೆ ಇನ್‌ಸ್ಪೆಕ್ಟರ್ ಗಂಗಿರೆಡ್ಡಿ ಮತ್ತು ಡಿಸಿಐಬಿ ಇನ್‌ಸ್ಪೆಕ್ಟರ್ ವಿನಯ ಎಸ್.ನಾಯಕ್ ಮತ್ತು ಸಿಬ್ಬಂದಿ ಒಟ್ಟುಗೂಡಿ ಕಾರ್ಯಾಚರಣೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ 4 ಗಂಟೆಯಿಂದ ಕಾದು ಕುಳಿತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸಂಜೆ ವರೆಗೂ ಹೊಂಚು ಹಾಕಿ ಕಾರ್ಯಾಚರಣೆ ನಡೆಸಿದರು.
 ತಮಿಳುನಾಡಿಲ್ಲಿರುವ ನಿರಾಶ್ರಿತ ಕೇಂದ್ರದಲ್ಲಿರುವ ಶ್ರೀಲಂಕಾ ವಲಸೆ ತಮಿಳರು ಒಂದು ರೀತಿಯ ಗೃಹ ಬಂಧನದಲ್ಲಿದ್ದಾರೆ. ಮೂಲಭೂತ ಹಕ್ಕುಗಳಿಲ್ಲ. ಹೀಗಾಗಿ ಅಲ್ಲಿದ್ದವರು ಹೊರ ಹೋಗಲು ಹಾತೊರೆಯುತ್ತಾರೆ.
ಇಂಥವರನ್ನು ಹೊರಗೆ ಕಳುಹಿಸುವ ಜಾಲ ಕಾರ್ಯಾಚರಿಸುತ್ತಿದೆ. ಮಂಗಳೂರಿನಲ್ಲಿ ಹಳೆ ಬೋಟ್‌ಗಳನ್ನು ಏಜೆಂಟ್‌ಗಳು ಖರೀದಿಸಿ ಅದನ್ನು ದುರಸ್ತಿಗೊಳಿಸಿ ಅದರಲ್ಲಿ ಜನರನ್ನು ತುಂಬಿಸಿಕೊಂಡು ಹೋಗುತ್ತಾರೆ. ಏಜೆಂಟ್‌ಗಳು ಈ ಹಿಂದೆಯೂ ಮೂರು ಬಾರಿ ನಿರಾಶ್ರಿತರನ್ನು ಕೇರಳ ಮೂಲಕ ಆಸ್ಟ್ರೇಲಿಯಾಕ್ಕೆ ಕಳುಹಿಸಲು ಪ್ಲಾನ್ ಮಾಡಿದ್ದರು ಆದರೆ ಪೊಲೀಸರ ಕಾರ್ಯಾಚರಣೆಯಿಂದ ವಿಫಲವಾಗಿತ್ತು.
ಧರ್ಮಸ್ಥಳಕ್ಕೆ ಹೋಗಿದ್ದರು: ಆಸ್ಟ್ರೇಲಿಯಾಕ್ಕೆ ಹೊರಟಿದ್ದವರಲ್ಲಿ 30 ಮಂದಿ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೋಗಿದ್ದರು. ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಇನ್ನು ಕೆಲವರು ನಗರದ ವಸತಿಗೃಹದಲ್ಲಿ ತಂಗಿದ್ದರು. ಎಲ್ಲರಿಗೂ ಮಧ್ಯಾಹ್ನ ಪೊಲೀಸ್ ಮೈದಾನ ಬಳಿ ಊಟ ನೀಡಿದರು. ಬಳಿಕ ಕುಡಿಯಲು ಶುದ್ಧ ಬಿಸ್ಲೇರಿ ನೀರು ಒದಗಿಸಿದರು. ಸಂಜೆ ವೇಳೆಗೆ ಸಿಸಿಬಿ ಕಚೇರಿಯಲ್ಲಿ ತಂಗಲು ವ್ಯವಸ್ಥೆ ಮಾಡಿದರು.


ಒಂದು ತಂಡ ಹೊರಟಿದೆ?


ನಿರಾಶ್ರಿತರು ಇನ್ನೆರಡು ದಿನಗಳಲ್ಲಿ ದೀರ್ಘ ಪ್ರಯಾಣಕ್ಕೆ ತಯಾರಿ ನಡೆಸಿದ್ದರು. ಬೋಟ್ ಕೂಡಾ ಖರೀದಿಸಿದ್ದರು. ಮಂಗಳೂರು ಕಡಲ ಕಿನಾರೆಯಿಂದ ಆಸ್ಟ್ರೇಲಿಯಾ ಮುಟ್ಟಲು ಕನಿಷ್ಠ 20 ದಿನ ಬೇಕು. ದಾರಿ ಮಧ್ಯೆ ಹಡಗಿನ ಮೂಲಕ ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ಒಂದು ತಂಡ ಹೊರಟಿರುವುದಾಗಿ ಏಜೆಂಟ್‌ಗಳು ಬಾಯಿ ಬಿಟ್ಟಿದ್ದಾರೆ.


ಅಲ್ಲಿ ಹೇಗೆ ಜೀವನ?


ಆಸ್ಟ್ರೇಲಿಯಾ ತೀರ ಮುಟ್ಟಿದ ತಕ್ಷಣ ಅಲ್ಲಿನ ಪೊಲೀಸರು ಬಂಧಿಸುತ್ತಾರೆ. ಅಕ್ರಮ ಪ್ರವೇಶದ ಬಗ್ಗೆ 6 ತಿಂಗಳು ಅಥವಾ 1 ವರ್ಷ ಬಂಧನ ಶಿಕ್ಷೆ ಅನುಭವಿಸಿ ಹೊರಬಂದು ಅಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಆಸ್ಟ್ರೇಲಿಯಾದಲ್ಲಿಯೂ ಕಾರ್ಮಿಕರಿಗೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆ ಎನ್ನಲಾಗಿದೆ.
ಮಾಜಿ ಉಗ್ರರು: ಕಳೆದ ಬಾರಿ ಶ್ರೀಲಂಕಾದ ಟೆಲೊ ಉಗ್ರಸಂಘಟನೆ ಮಾಜಿ ನಾಯಕ ಸೆರೆ ಸಿಕ್ಕಿದ್ದ. ಆತ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ, ಬಳಿಕ ಭಾರತಕ್ಕೆ ಬಂದು ನಿರಾಶ್ರಿತ ಕೇಂದ್ರದಲ್ಲಿ ತಂಗಿದ್ದ. ಆತನ್ನು ಪೊಲೀಸರು ಬಂಧಿಸಿದ್ದರು.


ಕಳೆದ ಬಾರಿ 84 ಮಂದಿ ರಕ್ಷಣೆ

ಕಳೆದ ಬಾರಿ 84 ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಿಸಿ ವಾಪಸ್ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿದ್ದರು. 84 ಮಂದಿಯಲ್ಲಿ 22 ಮಂದಿ ಮಹಿಳೆಯರು. 6 ಮಕ್ಕಳು. 6 ಸಾವಿರ ಡೀಸೆಲ್ 2.84 ಲಕ್ಷ ಮುಟ್ಟುಗೋಲು ಹಾಕಿದ್ದರು.  2011ರಲ್ಲಿ ಈ ರೀತಿಯ 7 ಪ್ರಕರಣಗಳು ದೇಶದಲ್ಲಿ ಅದರಲ್ಲಿಯೂ ಮುಖ್ಯವಾಗಿ ತಮಿಳುನಾಡಿನಿಂದ ಬಯಲಿಗೆ ಬಂದಿತ್ತು. 2012ರಲ್ಲಿ 13 ಪ್ರಕರಣಗಳು ದಾಖಲಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement