ಮೊಯ್ಲಿ ಸಹಿತ ಅಭ್ಯರ್ಥಿಗಳ ವಿರುದ್ಧ ಆಯೋಗಕ್ಕೆ ದೂರು
ಮಂಗಳೂರು: ನೀತಿಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್, ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ವಿರುದ್ಧ ಚುನಾವಣಾ ಆಯೋಗಕ್ಕೆ ಚುನಾವಣಾ ಕಾವಲು ಸಮಿತಿ ಶುಕ್ರವಾರ ದೂರು ಸಲ್ಲಿಸಿದೆ. ಮಂಗಳೂರಲ್ಲಿ ಗ್ಯಾಸ್ ಆಧಾರಿತ ವಿದ್ಯುತ್ ಯೋಜನೆ ಸ್ಥಾಪಿಸಿ ಕಡಿಮೆ ದರದಲ್ಲಿ ವಿದ್ಯುತ್ ನೀಡುವ ಕುರಿತಂತೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಬಂಟ್ವಾಳದಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅಲ್ಲದೆ ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್ ಮಂಗಳೂರಿಗೆ ರು. 350 ಕೋಟಿ ಎಡಿಬಿ ಯೋಜನೆ ಜಾರಿಗೊಳಿಸಿ ಮೂಲಸೌಕರ್ಯ ಅಭಿವೃದ್ಧಿಯ ಮಾತನ್ನಾಡಿದ್ದಾರೆ. ವಾಸ್ತವದಲ್ಲಿ ಎಡಿಬಿ ಕುಡ್ಸೆಂಪ್ಗೆ ಬಡ್ಡಿ ಸಹಿತ ಮರುಪಾವತಿಗೆ ರು. 186 ಕೋಟಿ ನೀಡಿದೆ. ಇಲ್ಲಿ ವ್ಯತ್ಯಾಸ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಭರಿಸುತ್ತದೆ. ಈ ವಾಸ್ತವವನ್ನು ಅವರು ಮರೆ ಮಾಚಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ, 1999 ರಿಂದ 2005ರ ಅವಧಿಯಲ್ಲಿ 2ನೇ ಹಂತದ ತುಂಬೆ ಅಣೆಕಟ್ಟೆ ಮಂಜೂರಾಗಿದ್ದು, ಅವರು 99ರಿಂದ 2000 ಅವಧಿಯಲ್ಲಿ ಪಾಲಿಕೆ ಆಯುಕ್ತರಾಗಿದ್ದರು. ಆಯುಕ್ತರಾಗಿ ಅಭಿವೃದ್ದಿ ಕಾರ್ಯ ಮಾಡಬೇಕಾದ್ದು ಅವರ ಕರ್ತವ್ಯ. ಹೀಗಾಗಿ ಈ ಮೂವರ ವಿರುದ್ಧ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಸಮಿತಿ ಸಂಯೋಜಕ ಕಟೀಲ್ ದಿನೇಶ್ ಪೈ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ ಪ್ರಚಾರಕ್ಕೆ ಮಕ್ಕಳನ್ನು ಬಳಸಬಾರದು ಎಂದು ಸಲಹೆ ನೀಡಿದ್ದಾರೆ.