ಸೌಜನ್ಯ ಕೊಲೆ ಆರೋಪಿ ಮಾನಸಿಕ ಸ್ವಸ್ಥ
ಜಿತೇಂದ್ರ ಕುಂದೇಶ್ವರ
ಮಂಗಳೂರು: ಧರ್ಮಸ್ಥಳ ಸಮೀಪ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ನಡೆಸಿ ಕೊಲೆಗೈದ ಸಂತೋಷ್ ರಾವ್ ಮಾನಸಿಕ ಸ್ವಸ್ಥ ಎಂದು ಬೆಂಗಳೂರಿನ ನಿಮ್ಹಾನ್ಸ್ ವೈದ್ಯರು ಪ್ರಮಾಣ ಪತ್ರ ನೀಡಿದ್ದಾರೆ.
ಅಕ್ಟೋಬರ್ 10ರಂದು ಧರ್ಮಸ್ಥಳದ ಪಾಂಗಳದಲ್ಲಿ ಚಂದಪ್ಪ ಗೌಡರ 17 ವರ್ಷದ ಮಗಳು ಸೌಜನ್ಯಳನ್ನು ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕಾರ್ಕಳ ಬಜಗೋಳಿಯ ಸಂತೋಷ್ ಎಂಬಾತನೇ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದಾಗಿ ಪೋಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.
ನಿಮ್ಹಾನ್ಸ್ ವೈದ್ಯರು ನೀಡಿದ ವರದಿಯಲ್ಲಿ ಆರೋಪಿ ಸಂತೋಷ್ ನಪುಂಸಕ ಅಲ್ಲ, ಆದರೆ ಸಮಸ್ಯೆ ಇದೆ ಎಂದು ಹೇಳಿದ್ದರು. ಮಾನಸಿಕ ಸಮಸ್ಯೆ ಇದ್ದರೂ ಆತನಿಗೆ ತಾನು ಮಾಡುತ್ತಿರುವುದು ಅಪರಾಧ ಎಂದು ಗೊತ್ತಿರುತ್ತದೆ. ಈತ ಹಿಂಸಾ ಸ್ವಭಾವ ಹೊಂದಿದವ ಎಂದು ವೈದ್ಯರು ಪ್ರಮಾಣ ಪತ್ರದಲ್ಲಿ ನಮೂದಿಸಿದ್ದಾರೆ.
ವೈದ್ಯಕೀಯ ವರದಿ: ಅತ್ಯಾಚಾರ ನಡೆದಿದೆ ಎಂಬುದಕ್ಕೆ ಖಚಿತ ದಾಖಲೆಗಳು ಇನ್ನೂ ಸಿಕ್ಕಿಲ್ಲ. ಇಬ್ಬರ ಗುಪ್ತಾಂಗದಲ್ಲಿ ಗಾಯಗಳಾಗಿದ್ದು, ಮಣ್ಣು ಕೂಡಾ ಸೇರಿದೆ. ಸಂತೋಷ್ ಬೆನ್ನಲ್ಲಿ ಉಗುರಿನ ಗೀರಿದ ಗಾಯಗಳಾಗಿವೆ. ಇದು ಲೈಂಗಿಕ ಹಲ್ಲೆಗೆ ಯತ್ನ ನಡೆದಿದೆ ಎಂಬುದು ಸಿದ್ಧವಾಗುತ್ತದೆ. ಆದರೆ ದೈಹಿಕವಾಗಿ ಸಂಪೂರ್ಣ ಸಂಪರ್ಕ ಆಗಿದೆ ಎಂಬುದಕ್ಕೆ ಸಾಕ್ಷಿ ಸಿಕ್ಕಿಲ್ಲ.
ವಿಧಿವಿಜ್ಞಾನ ಇಲಾಖೆಗೆ ಸೌಜನ್ಯಳ ದೇಹದ ಕೆಲವು ಸ್ಯಾಂಪಲ್ಗಳನ್ನು ಕಳುಹಿಸಲಾಗಿತ್ತು. ಅದು ಲ್ಯಾಬ್ನಲ್ಲಿಯೇ ಇದೆ, ವರದಿ ಇನ್ನೂ ಬಂದಿಲ್ಲ. ಆ ವರದಿ ಕೈ ಸೇರಿದರೆ ಸಿಐಡಿ ಪೊಲೀಸರಿಗೆ ಆರೋಪ ಸಿದ್ಧಪಡಿಸಲು ನೆರವಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.
ಸೈಕೊಸಿಸ್: ಈತ ಸೈಕೊಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಎಂಬುದಕ್ಕೆ ಆಸ್ಪತ್ರೆ ದಾಖಲೆಗಳು ಇವೆ. 2005ರಿಂದ ಶಿವಮೊಗ್ಗದ ಆಸ್ಪತ್ರೆಯಲ್ಲಿ 4 ವರ್ಷ ಇದ್ದ. 2 ವರ್ಷ ಮಾನಸಿಕ ರೋಗಕ್ಕೆ ಚಿಕಿತ್ಸೆ ಪಡೆದಿದ್ದ. 2 ವರ್ಷ ಅದೇ ಆಸ್ಪತ್ರೆಯಲ್ಲಿ ಇರುತ್ತೇನೆ ಎಂದು ಹಠ ಮಾಡಿದ್ದರಿಂದ ನರ್ಸ್ನಂತೆ ಕೆಲಸ ಮಾಡುತ್ತಿದ್ದ. ಈತನ ತಾಯಿಗೆ ಮಾನಸಿಕ ಸಮಸ್ಯೆ ಇತ್ತು ಎಂಬದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.
ಕರಾಟೆ ಮಾಸ್ಟರ್: ಈತ ಕರಾಟೆ ಬ್ಲ್ಯಾಕ್ ಬೆಲ್ಟ್ ಪಡೆದವ. ಇದನ್ನು ತಂದೆಯೇ ಹೇಳುತ್ತಾರೆ. ಕರಾಟೆ ತರಗತಿ ನಡೆಸಿ ಅನೇಕ ಮಕ್ಕಳಿಗೆ ತರಬೇತಿ ನೀಡುತ್ತಿದ್ದ. ಆದ್ದರಿಂದ ನೋಡಲು ಕೃಶವಾಗಿದ್ದರೂ ಬಲಿಷ್ಠನಾಗಿದ್ದ. ಸೌಜನ್ಯಳ ಕುತ್ತಿಗೆಯಲ್ಲಿ ಹಗ್ಗದ ರೂಪದಲ್ಲಿದ್ದ ಟೈಯನ್ನೇ ಹಿಡಿದೆಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎನ್ನುವುದು ಪೊಲೀಸರ ವಿಶ್ಲೇಷಣೆ.
ವೀಡಿಯೋ ವಿಚಾರಣೆ, ಹೇಳಿಕೆ ಬದಲಾವಣೆ
ಸಂತೋಷ್ನನ್ನು ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ವೀಡಿಯೋ ಮಾಡಿದ್ದಾರೆ. ವೀಡಿಯೋದಲ್ಲಿ ಆತ ಒಂದೊಂದು ರೀತಿಯಾಗಿ ಹೇಳಿಕೆ ನೀಡಿರುವುದು ದಾಖಲಾಗಿದೆ.
'ನಾನು ಸವಿತಳನ್ನು ಪ್ರೀತಿಸುತ್ತಿದ್ದೆ. ಆಕೆಯೇ ನನ್ನನ್ನು ಕರೆದಳು, ನಾನು ಹೋದೆ' ಎನ್ನುತ್ತಾನೆ. ಸವಿತ ಎಂದರೆ ಆತನ ಪತ್ನಿ.
ಸೌಜನ್ಯಳಲ್ಲಿ ಪತ್ನಿಯನ್ನು ಕಂಡೆ ಎನ್ನುವ ರೀತಿಯಲ್ಲಿ ಮಾತನಾಡುತ್ತಾನೆ. 'ಅವಳು ಬಂದಳು, ನಾವಿಬ್ಬರು ಮಜಾ ಮಾಡಿದೆವು. ಆಕೆ ಮನೆಗೆ ಹೋದಳು, ನಾನು ವಾಪಸ್ ಬಂದೆ' ಎನ್ನುತ್ತಾನೆ.
ಮತ್ತೊಂದು ಬಾರಿ ವಿಚಾರಣೆಯಲ್ಲಿ 'ನಾನೇ ಆಕೆಯನ್ನು ಎಳೆದುಕೊಂಡು ಹೋಗಿ ಕೈಹಾಕಿ ಅತ್ಯಾಚಾರ ಮಾಡಿದೆ' ಎನ್ನುತ್ತಾನೆ.
ಆದರೆ ಜೈಲ್ನಲ್ಲಿ ಸಂದರ್ಶನಕ್ಕೆ ಬಂದವರಲ್ಲಿ ನಾನೇನು ಮಾಡಿಲ್ಲ, ಪೊಲೀಸರೆ ನನ್ನ ಹೆಸರನ್ನು ಸೇರಿಸಿದ್ದಾರೆ ಎನ್ನುವಷ್ಟರ ಮಟ್ಟಿಗೆ ಮಾನಸಿಕ ಪ್ರಬುದ್ಧತೆ ತೋರುತ್ತಿದ್ದಾನೆ!
ಸಂತೋಷ್ ವಿರುದ್ಧ
ಸಿಐಡಿ ಆರೋಪ ಪಟ್ಟಿ
ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ಮಂದಿ ಆರೋಪಿಗಳು ಇದ್ದಾರೆ, ಸಂತೋಷ್ ಮಾನಸಿಕ ಅಸ್ವಸ್ಥ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು. ಸಿಐಡಿ ಪೊಲೀಸರು ತನಿಖೆ ನಡೆಸಿದ್ದು, ಮರಣೋತ್ತರ ವರದಿ ಮತ್ತು ಸಂತೋಷನ ವೈದ್ಯಕೀಯ ವರದಿ ಆಧಾರದಲ್ಲಿ ಆರೋಪಿ ಸಂತೋಷ ಒಬ್ಬನೇ ಆರೋಪಿ ಎಂದು ಇದೀಗ ಚಾರ್ಜ್ಶೀಟ್ ಹಾಕಿದ್ದಾರೆ.