ಸೌಜನ್ಯ ಕೊಲೆ ಆರೋಪಿ ಮಾನಸಿಕ ಸ್ವಸ್ಥ: ನಿಮ್ಹಾನ್ಸ್ ವೈದ್ಯರ ವರದಿ
ಕ.ಪ್ರ. ವಾರ್ತೆ , ಮಂಗಳೂರು , ಏ.26
ಧರ್ಮಸ್ಥಳ ಸಮೀಪ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ನಡೆಸಿ ಕೊಲೆಗೈದ ಸಂತೋಷ್ ರಾವ್ ಮಾನಸಿಕ ಸ್ವಸ್ಥ ಎಂದು ಬೆಂಗಳೂರಿನ ನಿಮ್ಹಾನ್ಸ್ ವೈದ್ಯರು ಪ್ರಮಾಣೀಕರಿಸಿದ್ದಾರೆ.
ಅಕ್ಟೋಬರ್ 10ರಂದು ಧರ್ಮಸ್ಥಳದ ಪಾಂಗಳದಲ್ಲಿ ಚಂದಪ್ಪ ಗೌಡರ ಪುತ್ರಿ 17 ವರ್ಷದ ಸೌಜನ್ಯಳನ್ನು ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕಾರ್ಕಳ ಬಜಗೋಳಿಯ ಸಂತೋಷ್ ಎಂಬಾತನೇ ಅತ್ಯಾಚಾರವೆಸಗಿ ಕೊಲೆ ಮಾಡಿರುವುದಾಗಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಸಂತೋಷ್ ಸೈಕೋಸಿಸ್ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಆತ 2005ರಿಂದ ನಾಲ್ಕು ವರ್ಷಗಳ ಕಾಲ ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದ ಎಂಬುವುದಕ್ಕೆ ವೈದ್ಯಕೀಯ ದಾಖಲೆಗಳು ಸಿಕ್ಕಿದ್ದವು. ಆದರೆ, ಆರೋಪವೆಸಗುವಾಗ ಸಂತೋಷ್ಗೆ ಮಾನಸಿಕ ಸ್ಥಿತಿ ಹೇಗಿತ್ತು ಎಂಬುದನ್ನು ತಿಳಿಯಲು ತಜ್ಞರ ಅಭಿಪ್ರಾಯ ಕೇಳಲಾಗಿತ್ತು.
ನಿಮ್ಹಾನ್ಸ್ ವೈದ್ಯರು ಸಂತೋಷ್ನ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವರದಿ ನೀಡಿದ್ದು, ಆತನಿಗೆ ಮಾನಸಿಕ ಅಸ್ವಸ್ಥತೆ ಇದ್ದರೂ, ತಾನು ಮಾಡುತ್ತಿರುವುದು ಅಪರಾಧ ಎಂದು ಗೊತ್ತಾಗುತ್ತದೆ. ಹಿಂಸಾ ಸ್ವಭಾವ ಇರುವ ಈ ಆರೋಪಿ ನಪುಂಸಕ ಅಲ್ಲ. ಆದರೆ ಸಮಸ್ಯೆ ಇದೆ ಎಂದು ವೈದ್ಯರು ಪ್ರಮಾಣ ಪತ್ರದಲ್ಲಿ ನಮೂದಿಸಿದ್ದಾರೆ.
ವೈದ್ಯಕೀಯ ವರದಿ: ಅತ್ಯಾಚಾರ ನಡೆದಿದೆ ಎಂಬುದಕ್ಕೆ ಖಚಿತ ಸಾಕ್ಷ್ಯಗಳಿನ್ನೂ ಸಿಕ್ಕಿಲ್ಲ. ಅತ್ಯಾಚಾರಕ್ಕೀಡಾದ ಯುವತಿ ಹಾಗೂ ಆರೋಪಿಗಳಿಬ್ಬರ ಗುಪ್ತಾಂಗದಲ್ಲಿಯೂ ಗಾಯಗಳಾಗಿದ್ದು, ಮಣ್ಣು ಸೇರಿಕೊಂಡಿತ್ತು.
ಸಂತೋಷ್ ಬೆನ್ನಲ್ಲಿ ಉಗುರಿನಿಂದ ಗೀರಿದ ಗಾಯಗಳಾಗಿದ್ದು, ಇದು ಲೈಂಗಿಕ ಹಲ್ಲೆಗೆ ಯತ್ನ ನಡೆದಿದೆ ಎಂಬುದು ಸಾಬೀತು ಪಡಿಸುತ್ತದೆ. ವಿಧಿವಿಜ್ಞಾನ ಇಲಾಖೆಗೆ ಸೌಜನ್ಯಳ ದೇಹದ ಕೆಲವು ಸ್ಯಾಂಪಲ್ಗಳನ್ನು ಕಳುಹಿಸಿದ್ದು, ಆ ವರದಿ ದೈಹಿಕವಾಗಿ ಇಬ್ಬರ ನಡುವೆ ಸಂಪೂರ್ಣ ಸಂಪರ್ಕ ಆಗಿದೆಯೇ ಎಂಬುದನ್ನು ಸಾಬೀತು ಪಡಿಸಲು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ನೆರವಾಗಲಿದೆ.
ವಿಡಿಯೋ ವಿಚಾರಣೆ, ಹೇಳಿಕೆ ಬದಲಾವಣೆ
ಸಂತೋಷ್ನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಆತ ಒಂದೊಂದು ವಿಡಿಯೋದಲ್ಲಿ ಒಂದೊಂದು ರೀತಿ ಹೇಳಿಕೆ ನೀಡಿರುವುದು ದಾಖಲಾಗಿದೆ. 'ನಾನು ಸವಿತಾಳನ್ನು ಪ್ರೀತಿಸುತ್ತಿದ್ದೆ. ಆಕೆಯೇ ನನ್ನನ್ನು ಕರೆದಳು, ನಾನು ಹೋದೆ' ಎನ್ನುತ್ತಾನೆ. ಸವಿತಾ ಎಂದರೆ ಆತನ ಪತ್ನಿ. ಸೌಜನ್ಯಳಲ್ಲಿ ಪತ್ನಿಯನ್ನು ಕಂಡೆ ಎನ್ನುವಂತೆ ಒಮ್ಮೆ ಮಾತನಾಡಿದ್ದಾನೆ. 'ಅವಳು ಬಂದಳು, ನಾವಿಬ್ಬರೂ ಮಜಾ ಮಾಡಿದೆವು. ಆಕೆ ಮನೆಗೆ ಹೋದಳು, ನಾನು ವಾಪಸ್ ಬಂದೆ' ಎನ್ನುತ್ತಾನೆ ಮತ್ತೊಮ್ಮೆ. ಮತ್ತೊಂದು ಬಾರಿ 'ನಾನೇ ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದೆ' ಎಂಬ ಹೇಳಿಕೆಯನ್ನೂ ನೀಡಿದ್ದಾನೆ. ಆದರೆ ಜೈಲ್ಗೆ ಅವನನ್ನು ಸಂದರ್ಶಿಸಲು ಹೋದರೆ, 'ನಾನೇನೂ ಮಾಡಿಲ್ಲ, ಪೊಲೀಸರೆ ನನ್ನ ಹೆಸರನ್ನು ಸೇರಿಸಿದ್ದಾರೆ' ಎನ್ನುವ ಮೂಲಕ ಮಾನಸಿಕ ಪ್ರಬುದ್ಧತೆ ತೋರುತ್ತಿದ್ದಾನೆ.
-ಜಿತೇಂದ್ರ ಕುಂದೇಶ್ವರ