ಈಡೇರಿಸಲಾಗದೆ ಭರವಸೆ ಏಕೆ ನೀಡುವಿರಿ?
ಮಂಗಳೂರು: ರಾಜ್ಯದಲ್ಲಿ ರೈತರಿಗೆ 24 ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಬಿಜೆಪಿ ಸರ್ಕಾರ ಹೇಳಿತು. ಎಲ್ಲಿ ನೀಡಿದಿರಿ ವಿದ್ಯುತ್? ಈಡೇರಿಸಲಾಗದಿದ್ದರೆ ಭರವಸೆ ಏಕೆ ನೀಡುತ್ತೀರಿ ಎಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.
ಮಂಗಳೂರಿನ ನೆಹರು ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿಗೂ ಗೊತ್ತಿದೆ 24 ಗಂಟೆ ವಿದ್ಯುತ್ ನೀಡಲು ಸಾಧ್ಯವಿಲ್ಲ ಎನ್ನುವುದು, ನಮಗೂ ಅದು ಗೊತ್ತಿದೆ. ನಾವು 8ರಿಂದ 9 ಗಂಟೆ ವಿದ್ಯುತ್ ಒದಗಿಸುವ ಭರವಸೆ ನೀಡಬಹುದು. ನಾವು ಕೊಟ್ಟ ಭರವಸೆ ಈಡೇರಿಸಲು ಬದ್ಧರಿದ್ದೇವೆ ಎಂದರು.
ಕೇಂದ್ರದ ಹಣ ಎಲ್ಲಿ ಹೋಯಿತು?: ಗ್ರಾಮೀಣ, ನಗರಾಭಿವೃದ್ಧಿ ಮತ್ತು ಸಮಾಜ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಕೋಟಿಗಟ್ಟಲೆ ಭರಪೂರ ಅನುದಾನ ನೀಡಿದೆ. ಹಣ ಎಲ್ಲಿ ಹೋಯಿತು, ಹೇಗೆ ನಾಪತ್ತೆಯಾಯಿತು? ಸಮಾಜದ ಬಡ, ದಲಿತ, ಹಿಂದುಳಿದ ವರ್ಗಗಳಿಗೆ ನೀಡಿದ ಸೌಲಭ್ಯ ಅವರನ್ನು ಮುಟ್ಟಿಲ್ಲ. ಜನರ ತೆರಿಗೆ ಹಣದಿಂದ ಅಧಿಕಾರಸ್ಥರು ಮತ್ತು ಅವರ ಸಹವರ್ತಿಗಳು ಆದಾಯ ಹೆಚ್ಚಿಸಿಕೊಂಡರು. ಜನರ ಹಿತ ಕಾಯದೆ, ಭದ್ರತೆ, ಸೌಲಭ್ಯ ನೀಡದವರನ್ನು ಏಕೆ ಬೆಂಬಲಿಸಬೇಕು ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದರು.
ಕೇಂದ್ರ ಸರ್ಕಾರ, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಹಿತ ಕಾಯುತ್ತಿದೆ. ರಾಜ್ಯದಲ್ಲಿ ರೈತರು, ಮೀನುಗಾರರು ಅಸಂತುಷ್ಟರಾಗಿದ್ದಾರೆ. ಅವರಿಗೆ ದಾಸ್ತಾನು ಸೌಲಭ್ಯ ಹೆಚ್ಚಿಸುವ, ಈ ಮೂಲಕ ಉತ್ತಮ ಬೆಲೆಗೆ ಮಾರಾಟ ಮಾಡಬಹುದು, ಆದರೆ ಸೌಲಭ್ಯ ನೀಡಿಲ್ಲ. ನರೇಗಾ ಇತರ ರಾಜ್ಯದಲ್ಲಿ ಯಶಸ್ವಿಯಾಗಿದೆ. ಆದರೆ ಕರ್ನಾಟಕದಲ್ಲಿ ಕೆಲಸ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಆಸಕ್ತಿ ಹೊಂದಿಲ್ಲ, ಬುಡಕಟ್ಟು ಜನರ ಏಳಿಗೆ ಮಾಡಲು ವಿಫಲವಾಗಿದೆ. ಕರ್ನಾಟಕ, ದೇಶದಲ್ಲಿ ಎಲ್ಲ ರಾಜ್ಯಗಳಿಗೂ ನಾಯಕ ರೂಪದಲ್ಲಿತ್ತು. ಇತ್ತೀಚೆಗೆ ಭ್ರಷ್ಟಾಚಾರದಿಂದ ತಳಕ್ಕೆ ತಲುಪಿದೆ. ಕರ್ನಾಟಕ ಮಾದರಿ ರಾಜ್ಯವನ್ನಾಗಿಸಲು, ಪ್ರಗತಿಪಥದತ್ತ ಒಯ್ಯಲು ಕಾಂಗ್ರೆಸ್ ಬೆಂಬಲಿಸಿ ಎಂದರು.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸ್ಥಿರತೆಯಿಂದ ಮಾತ್ರ ರಾಜ್ಯದ ಉಜ್ವಲ ಭವಿಷ್ಯ ಸಾಧ್ಯ. ಸ್ಥಳೀಯ ಚುನಾವಣೆಯಲ್ಲಿ ಬೆಂಬಲಿಸಿದಿರಿ. ನೀವು ಬದಲಾವಣೆ ಬಯಸಿದ್ದೀರಿ ಎಂಬುದು ಗೊತ್ತಾಗಿದೆ. ಬದಲಾವಣೆ ಸಮಯ ಬಂದಿದೆ, ಮೇ 5ರಂದು ನಿರ್ಧರಿಸಿ- ಕಾಂಗ್ರೆಸ್ಗೆ ಮತ ಚಲಾಯಿಸಿ ಎಂದು ಕರೆ ನೀಡಿದರು.
ರಾಜಕೀಯ ಲಾಭಕ್ಕೆ ಕೋಮು ದ್ವೇಷ ಬಿತ್ತುವರು: ನೈತಿಕತೆ, ಸಂಸ್ಕೃತಿ ರಕ್ಷಕರು ಹೇಳಿಕೊಂಡ ಮೂಲಭೂತವಾದಿಗಳಿಂದ ಕರ್ನಾಟಕದಲ್ಲಿ ಕೋಮು ಸೌಹಾರ್ದ ಹಾಳಾಗಿದೆ. ವೈಯಕ್ತಿಕ ಮತ್ತು ರಾಜಕೀಯ ಲಾಭಕ್ಕೆ ಕೋಮು ದ್ವೇಷ ಬಿತ್ತುತ್ತಿದ್ದಾರೆ. ಗಲಾಟೆ, ರಾಜಕೀಯ ಅಸ್ಥಿರತೆ, ಭ್ರಷ್ಟಾಚಾರ ಪರಿಣಾಮ ಕರ್ನಾಟಕಕ್ಕೆ ಈಗ ಹೂಡಿಕೆದಾರರು ಬರುತ್ತಿಲ್ಲ. ಅವರು ಬೇರೆ ರಾಜ್ಯಗಳತ್ತ ಮುಖ ಮಾಡಿದ್ದಾರೆ. ರಾಜ್ಯದಲ್ಲಿ ಸ್ಥಿರತೆ, ಕೋಮು ಸೌಹಾರ್ದ ಕಾಪಾಡುವ ವಾಗ್ದಾನವನ್ನು ಕಾಂಗ್ರೆಸ್ ಮಾಡುತ್ತದೆ ಎಂದರು.
ಆಹಾರ ಭದ್ರತೆ, ಜಮೀನು ಪುನರ್ವಸತಿ ಕಾಯ್ದೆ
ಭ್ರಷ್ಟಾಚಾರ ತಡೆಗೆ ಮೊದಲು ಹೆಜ್ಜೆ ಇಟ್ಟದ್ದೇ ನಾವು. ಮಾಹಿತಿ ಹಕ್ಕು ಕಾಯ್ದೆಯಿಂದ ಭ್ರಷ್ಟಾಚಾರ ಪತ್ತೆಗೆ ಸಹಕಾರಿಯಾಯಿತು. ಮಕ್ಕಳ ಶಿಕ್ಷಣಕ್ಕೆ ಆರ್ಟಿಇ ಜಾರಿಗೆ ತಂದೆವು. ಬುಡಕಟ್ಟು ಜನರ ಹಕ್ಕು, ರೈತರಿಗೆ ಜಮೀನು ಪುನರ್ವಸತಿ ಕಾಯ್ದೆ ಮತ್ತು ಆಹಾರ ಭದ್ರತೆ ಕಾಯ್ದೆ ಶೀಘ್ರದಲ್ಲಿ ಸಂಸತ್ನಲ್ಲಿ ಮಂಡಿಸಲಿದ್ದು ಜಾರಿಗೆ ತರುತ್ತೇವೆ ಎಂದು ಸೋನಿಯಾ ಭರವಸೆ ನೀಡಿದರು.
ಕನ್ನಡ ನಮನ
'ನಿಮಗೆ ನನ್ನ ನಮಸ್ಕಾರಗಳು' ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಸೋನಿಯಾ ಗಾಂಧಿ ಈ ನಡುವೆ 'ಬದಲಾವಣೆ ಬೇಕು' ಎಂದು ಕನ್ನಡದಲ್ಲಿಯೇ ಹೇಳಿದರು. ಧಾರ್ಮಿಕ, ಅಧ್ಯಾತ್ಮಿಕ, ಸಮಾಜ ಸುಧಾರಕರನ್ನು ನೀಡಿದ ಈ ಕರಾವಳಿ ವಿವಿಧತೆಯಲ್ಲಿ ಏಕತೆ ಇರುವ ನಾಡಾಗಿದೆ ಎಂದು ಬಣ್ಣಿಸಿದರು.