ಕಾಂಗ್ರೆಸ್ನಿಂದ ಭ್ರಷ್ಟಾಚಾರ ಸತ್ಯ ಮುಚ್ಚಿಹಾಕುವ ಷಡ್ಯಂತ್ರ: ಜೇಟ್ಲಿ
ಮಂಗಳೂರು: ಕೇಂದ್ರದಲ್ಲಿ ಯಾವುದೇ ಭ್ರಷ್ಟಾಚಾರ ಪ್ರಕರಣ ನಡೆದರೂ ಸತ್ಯ ಹೊರಬರದಂತೆ ಕಾಂಗ್ರೆಸ್ ಅದನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಷಡ್ಯಂತರ ಮಾಡುತ್ತಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2ಜಿ ಹಗರಣ, ಕಲ್ಲಿದ್ದಲು ಹಗರಣಗಳಲ್ಲಿ ಕಾಂಗ್ರೆಸ್ ವರ್ತಿಸಿದ ರೀತಿ ನೋಡಿದರೆ ತನಿಖಾ ಹಂತದಲ್ಲೇ ಅವನ್ನೆಲ್ಲ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಕಲ್ಲಿದ್ದಲು ಹಗರಣದಲ್ಲಿ ಸಿಬಿಐ ತನಿಖಾ ವರದಿಯನ್ನು ತಿದ್ದಿರುವುದು ಯಾರು ಮತ್ತು ಯಾಕಾಗಿ ಎನ್ನುವುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಈ ಬಗ್ಗೆ ಪ್ರಧಾನಿ ಪತ್ರ ಬರೆದಿದ್ದಾರೆಯೇ ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದರು. ಸಿಬಿಐ ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದೆ. ದೇಶದ ಯಾವುದೋ ಭಾಗದಲ್ಲಿ ನೈತಿಕ ಪೊಲೀಸ್ಗಿರಿಯಾದಾಗ ಬೊಬ್ಬೆ ಹಾಕುವ ಕಾಂಗ್ರೆಸಿಗರು, ಭ್ರಷ್ಟಾಚಾರ ತನಿಖೆ ವಿಚಾರದಲ್ಲೂ ಒಂದು ರೀತಿಯ ನೈತಿಕ ಪೊಲೀಸ್ಗಿರಿ ಆಗುತ್ತಿದೆ ಎಂದು ಆರೋಪಿಸಿದರು.
ಭಾರತದ 19 ಕಿ.ಮೀ ಪ್ರದೇಶವನ್ನು ಚೀನಾ ಆಕ್ರಮಿಸಿದ್ದು, ಭಾರತದ ವಿಶ್ವಾಸಾರ್ಹತೆಗೆ ಭಂಗ ಉಂಟು ಮಾಡುತ್ತಿದೆ. ಇದನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಕೇಂದ್ರ ಸ್ಪಷ್ಟಪಡಿಸುತ್ತಿಲ್ಲ. ಪಾಕಿಸ್ತಾನದಲ್ಲಿರುವ ಭಾರತದ ಕೈದಿ ಮೇಲೆ ಹಲ್ಲೆ ನಡೆಸಲಾಗಿದೆ. ಈ ವಿಚಾರದಲ್ಲೂ ಕೇಂದ್ರ ತನ್ನ ನಿಲುವು ಸ್ಪಷ್ಟಪಡಿಸಿಲ್ಲ. ಕೇಂದ್ರದ ಈ ಧೋರಣೆಯಿಂದಾಗಿ ಮಾಲ್ಡೀವ್ಸ್ ಸರ್ಕಾರ ಕೂಡ ಭಾರತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದರು ಜೇಟ್ಲಿ.
5 ವರ್ಷಗಳ ಹಿಂದೆ ಪ್ರಥಮವಾಗಿ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ಉತ್ತಮ ಸಾಧನೆಯನ್ನು ಮಾಡಿದ್ದು, ಮತದಾರರು ಮತ್ತೆ ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸವಿದೆ. ಸರ್ಕಾರ ಜನರ ಆಶಯಕ್ಕೆ ಸ್ಪಂದಿಸಿದೆ ಎಂದ ಅವರು, ಭ್ರಷ್ಟಾಚಾರ ಆರೋಪ ಬಂದಾಗ ನಾವು ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರನ್ನು ಇಳಿಸಿದ್ದೇವೆ. ಆದರೆ ಕಾಂಗ್ರೆಸ್ ಆಂಧ್ರದಲ್ಲೂ ಮುಖ್ಯಮಂತ್ರಿ ವಿರುದ್ಧ ಆರೋಪ ಇದ್ದರೂ ಅವರನ್ನು ಮುಂದುವರಿಸಿದೆ. ಇದು ಬಿಜೆಪಿ-ಕಾಂಗ್ರೆಸ್ಗೆ ಇರುವ ವ್ಯತ್ಯಾಸ ಎಂದರು.
ಬಿಎಸ್ವೈಯನ್ನು ಮರಳಿ ಬಿಜೆಪಿಗೆ ಕರೆತರುವ ಕುರಿತಂತೆ ಉಮಾಭಾರತಿ ಪ್ರಸ್ತಾಪವನ್ನು ಗಮನ ಸೆಳೆದಾಗ ಇಂಥ ಚರಿತ್ರೆಯನ್ನು ಬಿಜೆಪಿ ನೆನಪಿಸುವುದಿಲ್ಲ. ಈಗ ಏನಿದ್ದರೂ ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆಲ್ಲುತ್ತೇವೆ ಎಂಬುದರತ್ತ ಗಮನ ಎಂದರು.
ಚುನಾವಣೋತ್ತರ ಜೆಡಿಎಸ್ ಮೈತ್ರಿ ಕುರಿತ ಪ್ರಶ್ನೆಗೆ ಈಗ ಗೆಲ್ಲುವುದೊಂದೇ ದೃಷ್ಟಿ ಎಂದ ಜೇಟ್ಲಿ, ನರೇಂದ್ರ ಮೋದಿ ಭಾನುವಾರ ರಾಜ್ಯದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಾರೆ. ಬಿಎಸ್ವೈ ಬಿಜೆಪಿ ಬಿಟ್ಟ ಕಾರಣಕ್ಕೆ ಮೋದಿ ಒಂದೇ ದಿನ ಪ್ರಚಾರ ಮಾಡುತ್ತಾರೆ ಎಂಬುದರಲ್ಲಿ ಹುರುಳಿಲ್ಲ ಎಂದರು.
ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್, ವಿಧಾನ ಪರಿಷತ್ತು ಸದಸ್ಯ ಗಣೇಶ್ ಕಾರ್ಣಿಕ್, ಮಾಧ್ಯಮ ಪ್ರಮುಖ್ ರಾಜಗೋಪಾಲ ರೈ ಇದ್ದರು.