ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಖಾಸಗಿ ಮಾರುಕಟ್ಟೆ: ಅಡಕೆ ಕೊಟ್ಟರೆ ಹಣ ಸಿಗೋಲ್ಲ

Mainashree
Updated On : 28 Apr 2013, 11:25 am

ಮಂಗಳೂರು: ಚುನಾವಣಾ ನೀತಿಸಂಹಿತೆ ಅಡಕೆ ಮಾರುಕಟ್ಟೆಗೂ ತಟ್ಟಿದೆ. ವಿಶೇಷವಾಗಿ ಶೇ.80ರಷ್ಟಿರುವ ಖಾಸಗಿ ಮಾರುಕಟ್ಟೆ ಜಾಲ ಅಡಕೆ ಖರೀದಿಸಿದರೂ ಮೊತ್ತ ನೀಡಲಾಗದೆ ಪರಿತಪಿಸುತ್ತಿದೆ. ಇದರಿಂದ ಸಕಾಲದಲ್ಲಿ ಕೃಷಿ ಸಾಲ ಮರುಪಾವತಿಗೆ ಬೆಳೆಗಾರರೂ ಬವಣೆ ಪಡುವಂತಾಗಿದೆ.
 ನೀತಿಸಂಹಿತೆ ಪ್ರಕಾರ ರು. 50 ಸಾವಿರದಿಂದ ರು. 10 ಲಕ್ಷ ವರೆಗೆ ದಾಖಲೆಪತ್ರ ಇಲ್ಲದೆ ಮೊತ್ತ ಸಾಗಾಟ ಮಾಡುವಂತಿಲ್ಲ. ಇದೇ ತೆರಿಗೆ ರಹಿತ ಅಡಕೆ ವಹಿವಾಟು ನಡೆಸುವ ಖಾಸಗಿ ವ್ಯಾಪಾರಸ್ಥರಿಗೆ ಗಂಟಲ ಮುಳ್ಳಾಗಿ ಪರಿಣಮಿಸಿದೆ.
ಬೆಳೆಗಾರರಿಗೆ ತೊಂದರೆ ಏನು?: ಈಗ ಹೊಸ ಅಡಕೆಗೆ ಕೇಜಿಗೆ ರು. 138ರಿಂದ ರು. 142ರ ವರೆಗೆ ಇದೆ. ಹಳೆಯದಕ್ಕೆ ರು. 180 ರಿಂದ ರು. 188. ಈ ಧಾರಣೆ ಕಳೆದ 4 ತಿಂಗಳಿಂದ ಸ್ಥಿರವಾಗಿದೆ. ಮೊದಲು ಹೊಸತಕ್ಕೆ ರು. 135ರಿಂದ ದರ ಶುರುವಾಗಿತ್ತು. ಹಳತಕ್ಕೆ ಒಂದು ತಿಂಗಳ ಹಿಂದೆ ನಾಲ್ಕೈದು ರುಪಾಯಿ ಕಡಿಮೆಯಾಗಿತ್ತು. ಅದು ಬಿಟ್ಟರೆ ಧಾರಣೆಯಲ್ಲಿ ವ್ಯತ್ಯಾಸ ಆಗಿಲ್ಲ.
 ಈಗ ಬೆಳೆಗಾರರಿಗೆ ಸಾಲ ಮರುಪಾವತಿಸುವ ಕಾಲ. ಮೇ ಅಂತ್ಯದೊಳಗೆ ಕಳೆದ ಸಾಲಿನ ಬೆಳೆ ಸಾಲವನ್ನು ಮರುಪಾವತಿಸುವಂತೆ ಸಹಕಾರಿ ಬ್ಯಾಂಕ್‌ಗಳು ನೋಟಿಸ್ ನೀಡಿವೆ. ಹಾಗಾಗಿ ರೈತರು ಅಡಕೆಯನ್ನು ಧಾವಂತದಲ್ಲಿ ಮಾರುಕಟ್ಟೆಗೆ ತರುತ್ತಿದ್ದಾರೆ.
ಕ್ಯಾಂಪ್ಕೋ ಸಹಿತ ಸಹಕಾರಿ ಸಂಸ್ಥೆಗಳಿಗಿಂತ ಧಾರಣೆ ಹೆಚ್ಚಿರುವ ಖಾಸಗಿ ಮಾರುಕಟ್ಟೆಗೆ ರೈತರು ಅಡಕೆ ಮಾರಾಟಕ್ಕೆ ಮುಂದಾಗುತ್ತಾರೆ. ಮಾಲನ್ನು  ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ತಕ್ಷಣಕ್ಕೆ ಹಣ ಸಿಗುವುದಿಲ್ಲ. ಇದು ರೈತರ ಪಾಲಿಗೆ ಕಗ್ಗಂಟಾಗಿದೆ. ಅಂದಿನ ದರ ನಮೂದಿಸಿ ಮೇ 5ರ ಬಳಿಕ ಮೊತ್ತ ನೀಡುವುದಾಗಿ ಹೇಳಿ ಕಳುಹಿಸುತ್ತಾರೆ. ಇದರಿಂದ ಮೇ ಅಂತ್ಯದೊಳಗೆ ಬ್ಯಾಂಕ್‌ಗಳಲ್ಲಿ ಸಾಲ ಮರುಪಾವತಿಗೆ ಮೊತ್ತ ಪಾವತಿಸಲು ರೈತರಿಂದ ಸಾಧ್ಯವಾಗುತ್ತಿಲ್ಲ.
ನೀತಿ ಸಂಹಿತೆ ಭೀತಿ: ಖಾಸಗಿ ವ್ಯಾಪಾರಸ್ಥರು ಮಾಮೂಲಿನಂತೆ ಬೇಕಾದಷ್ಟು ಹಣ ತಂದಿಡುವುದಿಲ್ಲ. ಅಲ್ಲಿರುವ ಹಣಕ್ಕೆ ಯಾವುದೇ ದಾಖಲೆಪತ್ರ ಇರುವುದಿಲ್ಲ. ಇದು ಚುನಾವಣಾ ಉದ್ದೇಶಕ್ಕೆ ಅಲ್ಲವಾದರೂ ತೆರಿಗೆ ರಹಿತ ವ್ಯವಹಾರವಾದ್ದರಿಂದ ಅಧಿಕಾರಿಗಳು ಪತ್ತೆ ಮಾಡಿದರೆ ಹಣ ಕಳಕೊಳ್ಳುವ ಜತೆಗೆ ಕೇಸನ್ನೂ ಎದುರಿಸಬೇಕು. ಈ ಉಸಬಾರಿಯೇ ಬೇಡ ಎಂದು ವ್ಯಾಪಾರಸ್ಥರು ಚೆಕ್ ನೀಡಿ ಸಾಗಹಾಕುತ್ತಾರೆ ಇಲ್ಲವೇ ಹಣಕ್ಕೆ 15 ದಿನ ಬಿಟ್ಟು ಬನ್ನಿ ಎನ್ನುತ್ತಾರೆ. ಪುತ್ತೂರು, ಉಪ್ಪಿನಂಗಡಿ, ಕಡಬ, ಸುಳ್ಯ, ಬಂಟ್ವಾಳ, ಬೆಳ್ತಂಗಡಿಗಳಲ್ಲಿ ಇದೇ ಪರಿಸ್ಥಿತಿ.
 ಬ್ಯಾಂಕ್‌ಗಳಲ್ಲಿ ಎರಡೆರಡು ಖಾತೆ ತೆರೆದು ನಂತರ ಬೆಳೆಗಾರರಿಗೆ ಹಣ ಪಾವತಿಸುವ ಕ್ರಮವೂ ಇದೆ. ಆದರೆ ಅಂಥ ಅಪಾಯವನ್ನು ಆಹ್ವಾನಿಸಲು  ವ್ಯಾಪಾರಸ್ಥರು ಸಿದ್ಧರಿಲ್ಲ. ಚುನಾವಣಾ ನೀತಿ ಸಂಹಿತೆಯಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ ಎನ್ನುತ್ತಾರೆ ಉಪ್ಪಿನಂಗಡಿಯ ಅಡಕೆ ವ್ಯಾಪಾರಸ್ಥರೊಬ್ಬರು.
ಕ್ಯಾಂಪ್ಕೋಗೆ ವರದಾನ: ಖಾಸಗಿ ಮಾರುಕಟ್ಟೆಯಲ್ಲಿ ತಕ್ಷಣಕ್ಕೆ ಹಣ ಸಿಗುವುದಿಲ್ಲ ಎಂದರಿತ ಕೆಲವು ಮಂದಿ ಬೆಳೆಗಾರರು ಕ್ಯಾಂಪ್ಕೋಗೆ ಅಡಕೆ ನೀಡಿ ನೇರವಾಗಿ ಸಹಕಾರಿ ಸಂಘಕ್ಕೆ ಪಾವತಿಸುತ್ತಿದ್ದಾರೆ. ಹೊರ ಮಾರುಕಟ್ಟೆಯಷ್ಟೇ ಕ್ಯಾಂಪ್ಕೋದಲ್ಲಿ ಅಡಕೆ ಧಾರಣೆ ಇರುವುದರಿಂದ ಸಾಲ ಮುಕ್ತಾಯದ ಚಿಂತನೆಯಲ್ಲಿ ಬೆಳೆಗಾರರು ಕ್ಯಾಂಪ್ಕೋದತ್ತ ಮುಖಮಾಡುತ್ತಿದ್ದಾರೆ.
  ಇದರಿಂದ ಸಾಲ ಮರುಪಾವತಿ ಸುಲಭವಾಗಿದೆ ಎನ್ನುವುದು ಕೃಷಿ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಅಭಿಪ್ರಾಯ. ಪ್ರಸುತ ದಿನಂಪ್ರತಿ 1 ಸಾವಿರ ಕ್ವಿಂಟಾಲ್ ಅಡಕೆ ಕ್ಯಾಂಪ್ಕೋಗೆ ಬರುತ್ತಿದೆ. ಕೆಲವು ತಿಂಗಳಿಂದ ಧಾರಣೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದೆ ಎನ್ನುತ್ತಾರೆ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ.


 ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement