ಮದ್ಯಪಾನಿಗಳಿಗೆ ಮತ ನಿಷೇಧಿಸಿ: ಸಚ್ಚಿದಾನಂದ ಹೆಗಡೆ
ಮಂಗಳೂರು: 'ಚುನಾವಣೆ ಸಂದರ್ಭದಲ್ಲಿ ಮದ್ಯಪಾನ ಮಾಡಿ ಮತ ಹಾಕಲು ಬಂದವರಿಗೆ ಮತ ನೀಡಲು ಅವಕಾಶ ನೀಡಬಾರದು' ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಆಗ್ರಹಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ವೇಳೆ ಮದ್ಯದ ಹೊಳೆ ಹರಿಸುವ ಪ್ರವೃತ್ತಿ ನಿಲ್ಲಬೇಕು. ರಾಜ್ಯದಲ್ಲಿ ವರ್ಷಕ್ಕೆ ಸುಮಾರು 25 ಲಕ್ಷ ಮಂದಿ ಕುಡಿತದ ದಾಸರಾಗುತ್ತಿದ್ದಾರೆ. ಪ್ರತಿ ಚುನಾವಣೆ ಸಂದರ್ಭವೂ ಮದ್ಯಪಾನಿಗಳ ಸಂಖ್ಯೆ ಶೇ.8.33 ಏರಿಕೆಯಾಗಿರುತ್ತದೆ ಎಂದರು. ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಮದ್ಯದ ಆಮಿಷ ಒಡ್ಡದಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಮತದಾರರಲ್ಲಿ ಮತ ನೀಡದಂತೆ ಮಂಡಳಿ ಎಚ್ಚರಿಕೆ ನೀಡಬೇಕಾಗುತ್ತದೆ ಎಂದರು. ಸಂಶೋಧನೆ ಪ್ರಕಾರ ಕುಡಿತದಿಂದ ಮೆದುಳು ನಿಷ್ಕ್ರಿಯವಾಗುತ್ತದೆ. ಇದರಿಂದ ಸ್ಥೀಮಿತ ಕಳೆದುಕೊಳ್ಳುವುದರೊಂದಿಗೆ ನೆನಪಿನ ಶಕ್ತಿಯೂ ಕುಂಠಿತಗೊಳ್ಳುತ್ತದೆ. ಆದ್ದರಿಂದ ಮದ್ಯಮುಕ್ತ ಸಮಾಜದ ಸೃಷ್ಟಿಗೆ ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದರು.
ಮತದಾರರ ಗಮನಕ್ಕೆ: ಮತದಾರರು ಚುನಾವಣೆ ವೇಳೆ ಹಣ ಮತ್ತು ಮದ್ಯಪಾನದ ಆಮಿಷಕ್ಕೆ ಬಲಿಯಾಗದಂತೆ ಎಚ್ಚರವಹಿಸಿ. ಹೆಂಡದ ಆಮಿಷಕ್ಕೆ ಬಲಿಯಾಗಿ ಮತ ಚಲಾಯಿಸಿದಲ್ಲಿ ಹೆಂಡಕ್ಕಾಗಿ ನಮ್ಮನ್ನು ನಾವೇ ಮಾರಿದಂತೆ. ಈ ರೀತಿ ಮತ ಪಡೆಯುವುದು ಶಿಕ್ಷಾರ್ಹ ಅಪರಾಧ. ಇವುಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ, ಪೊಲೀಸ್ ಠಾಣೆಗೆ ದೂರು ನೀಡುವುದು ಕರ್ತವ್ಯ. ಉತ್ತಮ ಚಾರಿತ್ರ್ಯ, ಗುಣ, ಸಮಾಜಪರ ಚಿಂತನೆಯುಳ್ಳ, ಆಡಳಿತ ನಡೆಸಲು ಯೋಗ್ಯ ಅಭ್ಯರ್ಥಿಯನ್ನು ಆರಿಸಿಕೊಳ್ಳಿ ಎಂಬ ಕರಪತ್ರವನ್ನು ಮಂಡಳಿಯು ಮುದ್ರಿಸಿ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದು ಹೆಗಡೆ ತಿಳಿಸಿದರು.