ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Mainashree
Updated On : 28 Apr 2013, 11:24 am

ಗೋವಾ ಬಿಜೆಪಿ ಶಾಸಕರಿಂದ ಮತಯಾಚನೆ
ಮಂಗಳೂರು: ಅಲ್ಪಸಂಖ್ಯಾತರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಹಾಗಾಗಿ ರಾಜ್ಯದ ಅಲ್ಪಸಂಖ್ಯಾತ ಸಮುದಾಯ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಗೋವಾದ ಕಲಂಗಾಟ್ ಕ್ಷೇತ್ರದ ಶಾಸಕ ಮೈಕೆಲ್ ಲೋಬೋ ಮನವಿ ಮಾಡಿದ್ದಾರೆ.
 ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು 4 ಶಾಸಕರು ಸೇರಿದಂತೆ 6 ಮಂದಿ ತಂಡ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಿದ್ದೇವೆ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅದರಿಂದ ಅಭಿವೃದ್ಧಿಯನ್ನು ನಿರೀಕ್ಷಿಸಲು ಆಗದು. ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರಿಗೆ ವಿಶೇಷ ಮಾನ್ಯತೆ ನೀಡಿದೆ. ಗೋವಾದಲ್ಲಿ 7 ಮಂದಿ ಅಲ್ಪಸಂಖ್ಯಾತ ಬಿಜೆಪಿ ಶಾಸಕರಿದ್ದಾರೆ ಎಂದರು.
 ಗೋವಾದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾದ ಬಳಿಕ ಜನತೆ ನೆಮ್ಮದಿಯ ಜೀವನ ಸಾಗಿಸುವಂತಾಗಿದೆ. ಕಾಂಗ್ರೆಸ್ ಕೋಮುವಾದ ಕೆರಳಿಸುವ ಮೂಲಕ ಸಮಾಜದ ನೆಮ್ಮದಿಯನ್ನು ಹಾಳು ಮಾಡಿತ್ತು. ಈಗ ಜನರಿಗೆ ಕಾಂಗ್ರೆಸ್‌ನ ದುರಾಡಳಿತ ಅರ್ಥವಾಗಿದೆ ಎಂದು ಹೇಳಿದರು.
ಗೋವಾ ಶಾಸಕರಾದ ಗ್ಲೆನ್ ಸೋಜಾ ಟಿಕ್ಲೋ, ನೀಲೇಶ್ ಕಬ್ರಾಲ್, ಕರ್ಲೋಸ್ ಅಲ್ಮೇಡಿಯಾ, ಗೋವಾ ಬಿಜೆಪಿ ಉಪಾಧ್ಯಕ್ಷ ದತ್ತಪ್ರಸಾದ್, ಸದಸ್ಯ ಜುಯಿನ್ಹೋ ಡಿಸೋಜ, ವಿಧಾನ ಪರಿಷತ್ತು ಸದಸ್ಯ ಗಣೇಶ್ ಕಾರ್ಣಿಕ್, ಮುಖಂಡರಾದ ನಿತಿನ್ ಕುಮಾರ್, ದೇವದಾಸ್ ಶೆಟ್ಟಿ ಹಾಜರಿದ್ದರು.

ಪತ್ರಿಕಾಗೋಷ್ಠಿ ಬಗ್ಗೆ ಮಾಹಿತಿ ನೀಡಿ
ಮಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಲ್ಲ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪತ್ರಿಕಾಗೋಷ್ಠಿ ನಡೆಸಲು ಅನುಮತಿ ಅಗತ್ಯವಿಲ್ಲ, ಆದರೆ ಕಚೇರಿಗೆ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ವಿವಿಧ ಅಭ್ಯರ್ಥಿಗಳು ನಡೆಸಿರುವ ಪತ್ರಿಕಾಗೋಷ್ಠಿಗಳ ವಿವರಗಳನ್ನು ಖರ್ಚುವೆಚ್ಚಗಳ ಸಹಿತ ಆಯಾ ಚುನಾವಣೆ ಕ್ಷೇತ್ರದ ಅಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ದಾಖಲೆ ಇರಲಿ: ಜಿಲ್ಲಾಧಿಕಾರಿ
ಮಂಗಳೂರು: ಜಿಲ್ಲೆಯಲ್ಲಿ ಚುನಾವಣೆ ಅಕ್ರಮ ತಡೆಯಲು ಸ್ಟಾಟಿಕ್ ಸರ್ವೆಲೆನ್ಸ್ ತಂಡ ಕಾರ್ಯಪ್ರವೃತ್ತವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಚಲಿಸುವ ವಾಹನ ಚಾಲಕರು ಸೂಕ್ತ ದಾಖಲೆಯನ್ನು ತಮ್ಮೊಂದಿಗೆ ಇರಿಸಿಕೊಂಡು ತಪಾಸಣೆ ವೇಳೆ ಅಧಿಕಾರಿಗಳಿಗೆ ತೋರಿಸುವ ಮೂಲಕ ಸಹಕರಿಸಿ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೈದ್ಧಾಂತಿಕ ನೆಲೆಗಟ್ಟಲ್ಲಿ ಸ್ಪರ್ಧೆ
ಚುನಾವಣೆ ಸಂದರ್ಭದಲ್ಲಿ ಕೇವಲ ಗೆಲ್ಲುವುದಕ್ಕಾಗಿ ರಾಜಕೀಯ ಪಕ್ಷಗಳು ಸಾರ್ವಜನಿಕವಾಗಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತವೆ. ಇದು ಸರಿಯಲ್ಲ, ಬದಲಾಗಿ ಪಕ್ಷಗಳ ಸಾಧನೆಗಳನ್ನು ಚರ್ಚೆಯ ವಿಷಯವಾಗಿಟ್ಟುಕೊಂಡು ಮತದಾರನ ಮುಂದೆ ಬರಬೇಕು. ಸ್ಪರ್ಧಿಗಳು ಕೂಡ ತಾತ್ವಿಕ, ಸೈದ್ಧಾಂತಿಕ ನೆಲೆಗಟ್ಟಿನ ಆಧಾರದಲ್ಲಿ ಸ್ಪರ್ಧಿಸಬೇಕು. ಮುಖ್ಯವಾಗಿ ಚುನಾವಣೆ ಭ್ರಷ್ಟಾಚಾರ ಮುಕ್ತವಾಗಿ ನಡೆಯಬೇಕು. ಇಲ್ಲಿ ಮತದಾರನ ಮೇಲೆ ಯಾವುದೇ ರೀತಿಯಲ್ಲಿ ಒತ್ತಡ ಹೇರಬಾರದು. ಅದೇ ರೀತಿ ಮತದಾರ ಕೂಡ ಜಾಗೃತಿಯಿಂದ ಪ್ರತಿಯೊಂದು ಪಕ್ಷದ ಸ್ಪರ್ಧಾಳುವಿನ ಹಿನ್ನಲೆ ಮತ್ತು ಸಾಧನೆಗಳನ್ನು ಗಮನಿಸಿ ಮತದಾನ ಮಾಡಬೇಕೇ ಹೊರತು, ಯಾವುದೇ ಆಮಿಷ ಮತ್ತು ಪ್ರಲೋಭನೆಗಳಿಗೆ ಒಳಗಾಗಿ ಮತವನ್ನು ಮಾರಿಕೊಳ್ಳಬಾರದು.
-ಮಹಾಬಲೇಶ್ವರ ರಾವ್, ಹಿರಿಯ ಶಿಕ್ಷಣ ತಜ್ಞರು

ಮತ ಮಾರಾಟ ವ್ಯವಸ್ಥೆ ತೊಲಗಲಿ
ಚುನಾವಣೆ ನಿಷ್ಪಕ್ಷವಾಗಿ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ಹಣ, ಹೆಂಡಕ್ಕೆ ಮತವನ್ನು ಮಾರಿಕೊಳ್ಳುತ್ತಿದ್ದು ಈ ವ್ಯವಸ್ಥೆ ತೊಲಗಬೇಕು. ಇದನ್ನು ಹೋಗಲಾಡಿಸಲು ಚುನಾವಣಾ ಆಯೋಗ ಇನ್ನಷ್ಟು ಬಿಗು ಕ್ರಮ ಜರುಗಿಸಬೇಕು.  ಚುನಾವಣೆಯಲ್ಲಿ ಒಂದು ಮತಕ್ಕೂ ಬೆಲೆ ಇದೆ. ಹಾಗಾಗಿ ಎಲ್ಲರೂ ತಮ್ಮ ಮತವನ್ನು ಹಾಳು ಮಾಡದೇ ಚಲಾಯಿಸಲೇಬೇಕು.
-ನವೀನ್ ಡಿ. ಪಡೀಲ್, ಜನಪ್ರಿಯ ತುಳು ಹಾಸ್ಯ ನಟ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement