ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಳ್ಯ: ಗುಡುಗು, ಗಾಳಿ ಸಹಿತ ಭಾರಿ ಮಳೆ

Mainashree
Updated On : 28 Apr 2013, 11:25 am

ಸುಳ್ಯ: ಸುಳ್ಯ ಹಾಗೂ ಆಸುಪಾಸಿನಲ್ಲಿ ಶನಿವಾರ ಸಂಜೆಯೂ ಗುಡುಗು, ಸಿಡಿಲು, ಗಾಳಿ ಸಹಿತ ಭಾರಿ ಮಳೆ ಸುರಿದಿದ್ದು, ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದ ಕಟ್ಟಡದ ಮೇಲ್ಛಾವಣಿಗೆ ಅಲ್ಪಪ್ರಮಾಣ ಹಾನಿ ಸಂಭವಿಸಿದೆ.
ಶುಕ್ರವಾರ ಸಂಜೆ ಗಾಳಿ ಸಹಿತ ಮಳೆಗೆ ವ್ಯಾಪಕ ಹಾನಿ ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಸುಳ್ಯದ ಹಳೆಗೇಟಿನ ಮುಖ್ಯರಸ್ತೆ ಬದಿಯಲ್ಲಿ ಹಾಕಲಾಗಿದ್ದ ಮಣ್ಣನ್ನು ತೆರವುಗೊಳಿಸದೇ ಇದ್ದುದರಿಂದ ಮಳೆ ನೀರು ರಸ್ತೆಯಲ್ಲೇ ನಿಂತು ಸಂಚಾರಕ್ಕೆ ಅಡ್ಡಿಯಾಯಿತು. ಹರಿಹರ- ಕೊಲ್ಲಮೊಗ್ರ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತು.
ಮರ ವಿದ್ಯುತ್ ಲೈನ್ ಮೇಲೆ ಬಿದ್ದು ಮೂರು ವಿದ್ಯುತ್ ಕಂಬಗಳು ಮುರಿದಿವೆ. ಬಾಳುಗೋಡು ರಸ್ತೆ ಬದಿಯಿರುವ ದೂಪದ ಮರಗಳು ಸಾಲು ಸಾಲಾಗಿ ನೆಲಕ್ಕೆ ಉರುಳಿವೆ. ಸುಮಾರು 7 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಸಂಚಾರ ಸ್ಥಗಿತಗೊಂಡಿದೆ. ಬೀಳುವ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಅಜ್ಜಾವರ ಗ್ರಾಮದ ಮೇನಾಲ ಮೋನಪ್ಪ ಗೌಡರ ಮನೆಗೆ ತೆಂಗಿನ ಮರ ಹಾಗೂ ಉಪ್ಪಳಿಕೆ ಮರ ಬಿದ್ದು ಸಿಮೆಂಟ್ ಶೀಟ್, ಹಂಚು ಹಾಗೂ ಪಕ್ಕಾಸುಗಳಿಗೆ ಹಾನಿಯಾಗಿದೆ. ಸುಮಾರು ರು. 25 ಸಾವಿರ ನಷ್ಟ ಸಂಭವಿಸಿದೆ. ಮುರುಳ್ಯ ಗ್ರಾಮದ ಪಿಜಾವು ಕಾಲನಿಯ ದೈವಸ್ಥಾನದ ಛಾವಣಿ ಕುಸಿದು ಸುಮಾರು ರು. 30 ಸಾವಿರ ನಷ್ಟವಾಗಿದೆ. ಮುರುಳ್ಯ ಗ್ರಾಮದ ಪಿಜಾವು ಕಾಲನಿಯಲ್ಲಿ ಸಿಡಿಲು ಬಡಿದು 4 ಮನೆಗಳ ಗೋಡೆ ಬಿರುಕು ಬಿಟ್ಟಿದೆ. ನಿಂತಿಕಲ್ಲು ಕೆ.ಎಸ್. ಗೌಡ ಕಾಲೇಜಿನ ಛಾವಣಿಗೆ ಹಾನಿಯಾಗಿದೆ. ಪಂಜ ಪರಿಸರದಲ್ಲಿ ಗಾಳಿಯಿಂದ ಕೆಲವು ಕಡೆ ಅಡಕೆ, ತೆಂಗಿನ ಮರ ಉರುಳಿದೆ.
ಪಂಜದ ಮಂಜುನಾಥೇಶ್ವರ ಟಯರ್ ವರ್ಕ್ ಶಾಪ್ ಕಟ್ಟಡದ ಎದುರಿದ್ದ ಮರದ ರೆಂಬೆ ಮುರಿದು ಸಮೀಪದಲ್ಲಿದ್ದ ಕಟ್ಟಡದ ಮೇಲೆ ಬಿದ್ದು ಹಾನಿಯಾಗಿದೆ. ಅಲ್ಲೇ ಸಮೀಪದಲ್ಲಿ ನಿಲ್ಲಿಸಿದ್ದ ರಿಕ್ಷಾಕ್ಕೆ ಪವಾಡ ಸದೃಶ ರೀತಿಯಲ್ಲಿ ಯಾವುದೇ ಹಾನಿಯಾಗಿಲ್ಲ. ಮಥಾಯಸ್ ಎಂಬವರಿಗೆ ಸೇರಿದ ಕಟ್ಟಡದ ಮೇಲೆ ಮರದ ರೆಂಬೆ ಬಿದ್ದು, ಕಟ್ಟಡದ ಮಾಡಿಗೆ ಹಾನಿಯಾಗಿದೆ. ಪೇಟೆಯಲ್ಲಿರುವ ಫಾಸ್ಟ್‌ಫುಡ್ ಕ್ಯಾಂಟಿನೊಂದರ ಶೀಟ್ ಸಂಪೂರ್ಣ ಹಾರಿಹೋಗಿದೆ.
ವಿದ್ಯುತ್ ಪೂರೈಕೆ ಅಸ್ತವ್ಯಸ್ತ: ಸುಳ್ಯ ತಾಲೂಕಿನ ಬಹುತೇಕ ಕಡೆ ಶುಕ್ರವಾರ ಸಂಜೆಯಿಂದ ವಿದ್ಯುತ್ ನಾಪತ್ತೆಯಾಗಿದೆ.
ಶುಕ್ರವಾರ ಸಂಜೆ ಸುರಿದ ಭಾರಿ ಗಾಳಿ ಮಳೆಯ ಸಂದರ್ಭ ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಕಾರಣ ವಿದ್ಯುತ್ ಸರಬರಾಜು ವ್ಯವಸ್ಥೆ ಕಡಿತವಾಗಿದೆ.
ಸುಳ್ಯ ಕುಂಬ್ರ ಮಧ್ಯೆ ವಿದ್ಯುತ್ ಲೈನ್‌ನಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಸುಳ್ಯಕ್ಕೂ ವಿದ್ಯುತ್ ಸರಬರಾಜಾಗುತ್ತಿಲ್ಲ. ಹಲವೆಡೆ ಕೂಡಾ ವಿದ್ಯುತ್ ಲೈನ್‌ಗಳಲ್ಲಿ ತೊಂದರೆಯಿದ್ದು, ಇದನ್ನು ಸರಿಗೊಳಿಸಿದ ನಂತರವಷ್ಟೇ ವಿದ್ಯುತ್ ಪೂರೈಕೆ ಸಮರ್ಪಕವಾಗಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement