ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತಾಯಿಯನ್ನೇ ಕೊಂದ ಯುವತಿ, ಪ್ರಿಯಕರ: ಆರೋಪ ಸಾಬೀತು

Lingaraj Badiger
Updated On : 29 Apr 2013, 11:50 am

ಪುತ್ತೂರು: ವರ್ಷದ ಹಿಂದೆ ತಾಯಿಯನ್ನು ಕೊಂದು ಬಾವಿಗೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿದ್ದ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಪುತ್ತೂರಿನ ತ್ವರಿತಗತಿ ನ್ಯಾಯಾಲಯ ಅಪರಾಧಿಗಳೆಂದು ತೀರ್ಮಾನಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಮೇ 15ಕ್ಕೆ ನಿಗದಿಗೊಳಿಸಿದೆ.
2012 ಫೆ.24ರಂದು ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ಪುಳಿತ್ತಡಿ ಎಂಬಲ್ಲಿ ಬಾವಿಯೊಂದರಲ್ಲಿ ಪಟ್ಲಡ್ಕ ನಿವಾಸಿ ರತ್ನಾವತಿ ಯಾನೆ ಸುಂದರಿ ಎಂಬವರ ಮೃತದೇಹ ಪತ್ತೆಯಾಗಿದ್ದು, ಅವರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಆಕೆಯ ಪುತ್ರಿ ಕುಸುಮಾ ಮತ್ತು ಆಕೆಯ ಪ್ರಿಯಕರ ಚಂದ್ರಶೇಖರ ಯಾನೆ ಚಂದ್ರನಾಯ್ಕ ಎಂಬವರನ್ನು ನ್ಯಾಯಾಲಯ ಅಪರಾಧಿಗಳೆಂದು ತೀರ್ಮಾನಿಸಿ ತೀರ್ಪು ನೀಡಿದೆ.
ಏನಾಗಿತ್ತು: ರತ್ನಾವತಿ ಪುಳಿತ್ತಡಿ ನಿವಾಸಿ ನಿವೃತ್ತ ಶಿಕ್ಷಕ ವೆಂಕಟ್ರಮಣ ಭಟ್ ಅವರ ಮನೆಯಲ್ಲಿ ಕೂಲಿಯಾಳು ಆಗಿ ದುಡಿಯುತ್ತಿದ್ದರು. 2012 ಫೆ.24ರಂದು ಸಂಜೆ ರತ್ನಾವತಿ, ವೆಂಕಟ್ರಮಣ ಭಟ್ ಅವರ ಕೊಟ್ಟಿಗೆಯ ಪಕ್ಕದಲ್ಲಿ ಅಡಕೆ ಸುಲಿಯುವ ಕೆಲಸದಲ್ಲಿ ನಿರತರಾಗಿದ್ದ ವೇಳೆ ಅಲ್ಲಿಗೆ ತೆರಳಿದ್ದ ಆರೋಪಿಗಳು ರತ್ನಾವತಿ ಅವರಿಗೆ ಕತ್ತಿಯಿಂದ ಕಡಿದು, ದೊಣ್ಣೆಯಿಂದ ಹೊಡೆದು ಕೊಲೆಗೈದು, ಬಳಿಕ ಅವರ ಕುತ್ತಿಗೆಗೆ ಹಗ್ಗದಿಂದ ಬಿಗಿದು ಎಳೆದುಕೊಂಡು ಹೋಗಿ ಅಲ್ಲೇ ಪಕ್ಕದಲ್ಲಿರುವ ತೋಟದ ಕೆರೆಗೆ ಹಾಕಿದ್ದರು ಎಂಬ ಆರೋಪವಿತ್ತು.
ಇಂದು ಸುಗ್ಗಿ ಉತ್ಸವ
ಸೋಮವಾರಪೇಟೆ: ತಾಲೂಕಿನ ಕೂತಿನಾಡು ವ್ತಾಪ್ತಿಯ 18 ಗ್ರಾಮಗಳ ಸುಗ್ಗಿ ಉತ್ಸವ ಸೋಮವಾರ ನಗರಳ್ಳಿಯಲ್ಲಿ ಹಿಂದಿನ ಕಾಲದಿಂದ ನಡೆದು ಬಂದಂತೆ ಈ ಬಾರಿ ಕೂಡ ಶ್ರದ್ಧಾ- ಭಕ್ತಿಯಿಂದ ನಡೆಯಲಿದೆ.
ಏಪ್ರಿಲ್ ತಿಂಗಳಲ್ಲಿ ನಡೆಯುವ ವಾರ್ಷಿಕ ಸುಗ್ಗಿ, ಕೂತಿ ನಾಡು ಶ್ರೀ ಸಬ್ಬಮ್ಮ ದೇವಿಯ (ಲಕ್ಷ್ಮೀ)ಉತ್ಸವ ಎಂದೇ ಹೆಸರಾಗಿರುವ ನಗರಳ್ಳಿ ಸುಗ್ಗಿ ಹಲವು ಆಚಾರ ವಿಚಾರಗಳಿಂದ ಕೂಡಿದ ವೈಶಿಷ್ಟವಾಗಿದೆ.
ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಸೇರಿದಂತೆ ಪಕ್ಕದ ಸಕಲೇಶಪುರ ತಾಲೂಕಿನ ಓಡಳ್ಳಿ ಸೇರಿದಂತೆ ಒಟ್ಟು 18 ಗ್ರಾಮಗಳ ಜನರು ಒಂದೆಡೆ ಕಲೆತು ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಅನಾದಿ ಕಾಲದಿಂದ ನಡೆದು ಬಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವುದು ವಾಡಿಕೆಯಾಗಿದೆ.
ಸೋಮವಾರ ನಗರಳ್ಳಿಯ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಜಾನಪದದ ಭಾಗವಂತೂ ಗ್ರಾಮೀಣ ಭಾಗದ ಜನರು ಗ್ರಾಮ ದೇವತೆಯ ಮೇಲಿಟ್ಟಿರುವ ಭಕ್ತಿಭಾವವನ್ನು ತೋರಿಸುತ್ತದೆ. ಕಡವೆ ಬೇಟೆ, ದೇವರ ಸುಗ್ಗಿ ಸೇರಿದಂತೆ ಅನೇಕ ಜಾನಪದ ಕಲೆಗಳೊಂದಿಗೆ ನಡೆಯುವ ಸುಗ್ಗಿ ನೋಡುಗರ ಗಮನ ಸೆಳೆಯಲಿದೆ. ಸುಗ್ಗಿ ಹಬ್ಬಕ್ಕೆ ಕೂತಿ ನಾಡಿನಿಂದ ಹೊರ ಜಿಲ್ಲೆಗೆ ಉದ್ಯೋಗ ಅರಸಿ ಹೋದವರು, ಅವರ ಸ್ನೇಹಿತರು, ಬಂಧುಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವುದು ಈ ಸುಗ್ಗಿ ಹಬ್ಬದ ವಿಶೇಷವಾಗಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement