ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದೈವ ಸನ್ನಿಧಿಯಲ್ಲಿ ಸತ್ಯ ಪ್ರಮಾಣಕ್ಕೆ ಆಹ್ವಾನ

Lingaraj Badiger
Updated On : 29 Apr 2013, 11:53 am

ಸುಳ್ಯ: ಬೇಂಗಮಲೆ ಕಾಲನಿಯಲ್ಲಿ ಶಾಸಕ ಎಸ್. ಅಂಗಾರ ಮತ್ತಿತರರು ಮತಯಾಚನೆಗೆ ಹೋದಾಗ ನಡೆದ ಅಹಿತಕರ ಘಟನೆ ಸಂದರ್ಭದಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ದೂರು ಸುಳ್ಳಾಗಿದ್ದು ಈ ಕುರಿತಂತೆ ಸುಳ್ಳು ದೂರು ನೀಡಿದವರನ್ನು ಸತ್ಯ ಪ್ರಮಾಣಕ್ಕೆ ಆಹ್ವಾನಿಸುವುದಾಗಿ ಜಿ.ಪಂ. ಸದಸ್ಯ ನವೀನ್ ಕುಮಾರ್ ರೈ ಮೇನಾಲ ತಿಳಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಬೆಳಗ್ಗೆ 10 ಗಂಟೆಗೆ ಸುಳ್ಯದ ಕಲ್ಕುಡ ದೈವದ ಸನ್ನಿಧಿಯಲ್ಲಿ, 11.30ಕ್ಕೆ ತೊಡಿಕಾನ ಪಾಷಾಣಮೂರ್ತಿ ಸನ್ನಿಧಿಯಲ್ಲಿ ಮತ್ತು 12 ಗಂಟೆಗೆ ತೊಡಿಕಾನ ಮಲ್ಲಿಕಾರ್ಜುನ ಸನ್ನಿಧಿಯಲ್ಲಿ ಸತ್ಯ ಪ್ರಮಾಣ ಮಾಡಲಾಗುವುದು. ಈ ಸಂದರ್ಭ ದೂರು ನೀಡಿದ ಮಹಿಳೆಯರು, ಆರೋಪಿಸಿದ ಕಾಲನಿಯವರು ಮತ್ತು ದೂರಿಗೆ ಕುಮ್ಮಕ್ಕು ನೀಡಿದ ಚಂದ್ರಲಿಂಗಂ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪ ಗೌಡರು ಅಲ್ಲಿಗೆ ಬರಬೇಕು. ಶಿವಕುಮಾರ್ ಕೌಡಿಚ್ಚಾರ್ ಮೂಲಕ ಅವರಿಗೆ ಸತ್ಯ ಪ್ರಮಾಣದ ವಿಷಯ ತಿಳಿಸಲಾಗುವುದು ಎಂದರು.
ದೂರು ಪೂರ್ತಿ ನಿಜವಲ್ಲ: ನಮ್ಮ ದೂರು ಕೂಡಾ ಪೂರ್ತಿ ಸತ್ಯ ಎಂದು ನಾವು ಹೇಳುವುದಿಲ್ಲ. ಅದರಲ್ಲಿ ಉಲ್ಲೇಖಿಸಿದಂತೆ ಅವರು ದೂಡಿದಾಗ ನಾನು ಬಿದ್ದಿಲ್ಲ. ಕಾನೂನಿಗೆ ಬೇಕಾಗಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದೆ. ದೇವರ ಎದುರು ನಾವು ಸತ್ಯ ಸಂಗತಿಯನ್ನೇ ಹೇಳುತ್ತೇವೆ. ಅವರು ಅದನ್ನೇ ಹೇಳಲಿ. ಅವರು ಅಲ್ಲಿಗೆ ಬಾರದಿದ್ದಲ್ಲಿ ನಾವು ಪ್ರಾರ್ಥನೆ ಮಾಡಿ ಬರುತ್ತೇವೆ. ಚನಿಯಪ್ಪ ನಮ್ಮ ಕಾರ್ಯಕರ್ತರಾದುದರಿಂದ ಅವರ ಹೆಸರಲ್ಲಿ ದೂರು ನಿಡಲಾಗಿದೆ ಎಂದು ನವೀನ್ ರೈ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಿಜಿಎಸ್‌ಎನ್ ಪ್ರಸಾದ್, ಶೇಖರ್ ಮಡ್ತಿಲ, ಕಿಶನ್ ಜಬಳೆ, ಮಹೇಶ್ ಜಬಳೆ, ಅವಿನ್ ಬಾಂಜಿಕೊಡಿ, ಮಂಜು ಬಾಂಜಿಕೋಡಿ, ಲವ ಬಾಂಜಿಕೋಡಿ, ವಸಂತ ಬಾಂಜಿಕೋಡಿ, ಕಮಲಾಕ್ಷ ರೈ  ಇದ್ದರು.

ಘಟನೆಗೆ ರಾಜಕೀಯ ಬೆರೆಸದಿರಿ: ಕಾಲನಿ ನಿವಾಸಿಗರು
ಸುಳ್ಯ: ಬೇಂಗಮಲೆ ಕಾಲನಿಯಲ್ಲಿ ಶಾಸಕ ಅಂಗಾರ ಮತ್ತು ಇತರರು ಮತಯಾಚನೆಗೆ ಬಂದ ಸಂದರ್ಭದಲ್ಲಿ ನಡೆದ ಘಟನೆ ರಾಜಕೀಯ ಕಾರಣಕ್ಕಾಗಿ ಸಂಭವಿಸಿದ್ದಲ್ಲ. ಇದರ ಹಿಂದೆ ಯಾವ ರಾಜಕೀಯ ಪಕ್ಷವೂ ಇಲ್ಲ. ದಯವಿಟ್ಟು ಘಟನೆಗೆ ರಾಜಕೀಯ ಬೆರೆಸಬೇಡಿ ಎಂದು ಕಾಲನಿ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ಮೋಹನ್ ಸುಂದರ್, ಇದು ನಮ್ಮ ಆತಂಕದ ವಿಷಯ. ರಾಜಕೀಯದ ವಿಷಯವಲ್ಲ. ಚುನಾವಣೆಯಲ್ಲಿ ಮತ ಕೇಳಲು ಎಲ್ಲರಿಗೂ ಹಕ್ಕಿದೆ. ನಾವು ಕೂಡಾ ಬಹಳ ವರ್ಷ ಬಿಜೆಪಿ ಯಲ್ಲಿ ಕೆಲಸ ಮಾಡಿದವರು. ಹಾಗಾಗಿ ಶಾಸಕರು ಬಂದಾಗ ನಾವು ಗೌರವ ಕೊಟ್ಟು ಮಾತನಾಡಿಸಿದ್ದೇವೆ. ನಮ್ಮ ಬೇಡಿಕೆಯ ಬಗ್ಗೆ ಪ್ರಸ್ತಾಪಿಸಿದ್ದೇವೆ. ಆದರೆ ಈ ಸಂದರ್ಭ ಜತೆಗಿದ್ದ ನವೀನ್ ಕುಮಾರ್ ಮೇನಾಲ ನಮ್ಮನ್ನು ನೋಡಿಕೊಳ್ಳುವುದಾಗಿ ಬೆದರಿಸಿದ್ದರಿಂದ ಮತ್ತು ಪ್ರಶ್ನಿಸಿದ ನಮ್ಮ ಕಡೆಯ ಯುವಕನೊಬ್ಬನ ಮೇಲೆ ನವೀನ್ ಸಾರಕೆರೆ ಕೈ ಮಾಡಿದ್ದರಿಂದ ಘಟನೆ ನಡೆದಿದೆ ಎಂದು ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement