ನಿಡ್ಡೋಡಿ ಸ್ಥಾವರ ಸ್ಥಾಪನೆಗೆ ಕಾಂಗ್ರೆಸ್ ಕಾರಣ: ಸುದತ್ತ ಜೈನ್ ಆರೋಪ
ಮಂಗಳೂರು: ನಿಡ್ಡೋಡಿಯಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆಗೆ ವ್ಯವಸ್ಥೆ ನಡೆಸುವ ಕುರಿತು ಅಲ್ಲಿನ ಜನತೆ ತಿಳಿದಿದ್ದರೂ, ಜನಪ್ರತಿನಿಧಿಗಳಿಗೆ ಇನ್ನೂ ತಿಳಿದಿಲ್ಲ ಎನ್ನುತ್ತಿರುವುದು ವಿಪರ್ಯಾಸ. ನಿಡ್ಡೋಡಿ ಸ್ಥಾವರ ಸ್ಥಾಪನೆಗೆ ನೇರ ಹೊಣೆ ಕಾಂಗ್ರೆಸ್ ಎಂದು ಕಾರ್ಮಿಕ ಮುಖಂಡ ಸುದತ್ತ ಜೈನ್ ಶಿರ್ತಾಡಿ ಆರೋಪಿಸಿದರು. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾತನಾಡಿದರು. ಜನಸಾಮಾನ್ಯರ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಲು ಮೂಲ್ಕಿ- ಮೂಡುಬಿದಿರೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಅಭಯ ಕುಮಾರ್ ಜೈನ್ ಹಾಗೂ ಕಾಪು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ವಿಜಯ ಹೆಗ್ಡೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಜನಸಾಮಾನ್ಯರನ್ನು ಗೊಂದಲ ಮಾಡಲು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಜಿಲ್ಲೆಯ ಬುದ್ದಿವಂತ ಜನರು ಸೂಕ್ತ ಅಭ್ಯರ್ಥಿಗಳನ್ನು ಗೆಲ್ಲಿಸುವ ಭರವಸೆ ಇದೆ ಎಂದರು.
ಅಭಯಕುಮಾರ್ ಜೈನ್ ಆಟೋ ಚಾಲಕನಾಗಿದ್ದು, ವಿಜಯ ಕುಮಾರ್ ಹೆಗ್ಡೆ ಅವರು ಕಾರ್ಮಿಕರ ಸಂಘದ ಅಧ್ಯಕ್ಷರಾಗಿದ್ದಾರೆ. ಇಬ್ಬರೂ ತಮ್ಮ ಪ್ರದೇಶದ ಜನಸಾಮಾನ್ಯರ ಸಮಸ್ಯೆಗಳ ಅರಿವಿದ್ದು ಕಾರ್ಮಿಕರ ಪರವಾಗಿ ಅನೇಕ ಹೋರಾಟ ನಡೆಸಿದ್ದಾರೆ ಎಂದು ಹೇಳಿದರು. ಗೋಷ್ಠಿಯಲ್ಲಿ ಮೂಡುಬಿದಿರೆ ಕ್ಷೇತ್ರದ ಅಭ್ಯರ್ಥಿ ಅಭಯಕುಮಾರ್ ಜೈನ್, ಬಳಕೆದಾರರ ವೇದಿಕೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ನಿಡ್ಡೋಡಿ, ಅಖಿಲ ಭಾರತ ಕಾರ್ಮಿಕ ಸಂಘಟನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಿನೇಶ್ ಪಡುಕೋಣೆ, ಕೋಶಾಧ್ಯಕ್ಷ ಜಗದೀಶ್ ಮರೋಳಿ ಇದ್ದರು.