ನೀತಿ ಸಂಹಿತೆಯಲ್ಲಿ ದ್ವಂದ್ವ ನೀತಿ: ಆರೋಪ
ಮಂಗಳೂರು: ಒಂದೊಂದು ಗುಂಪಿಗೆ, ಜಾತಿಗೆ ಆಧರಿಸಿ ಚುನಾವಣೆ ನೀತಿ ಸಂಹಿತೆ ಅಳವಡಿಸಲಾಗುತ್ತಿದ್ದು, ಚುನಾವಣೆ ಆಯೋಗ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ಕೋಮು ಸೌಹಾರ್ದ ವೇದಿಕೆ ಆರೋಪಿಸಿದೆ.
ನೆಹರೂ ಮೈದಾನದಲ್ಲಿ ಏ. 19 ರಿಂದ 21ರವರೆಗೆ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ರಾಜಕಾರಣಿಗಳು ಭಾಗವಹಿಸಿದ್ದು, ಆರ್ಎಸ್ಎಸ್ ಪ್ರಮುಖರೊಬ್ಬರು ಪ್ರಚೋದನಕಾರಿ ಭಾಷಣ ಮಾಡಿರುವುದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಬಳಿ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಮಿಲಾಗ್ರಿಸ್ ಚರ್ಚ್ನ ಪ್ಯಾರಿಷ್ ಮಂಡಳಿ ವತಿಯಿಂದ ಏ. 7ರಂದು 'ಸೌಹಾರ್ದ ಸಂಭ್ರಮ' ಎಂಬ ಸಾಮಾಜಿಕ ಕಾರ್ಯಕ್ರಮ ನಡೆಯಬೇಕಿತ್ತು. ಇದರಲ್ಲಿ ಯಾವುದೇ ರಾಜಕಾರಣಿಗಳು ಪಾಲ್ಗೊಳ್ಳುತ್ತಿರಲಿಲ್ಲ, ಆದರೆ ಜಿಲ್ಲಾಧಿಕಾರಿ ಕಾರ್ಯಕ್ರಮ ರದ್ದುಗೊಳಿಸಿದ್ದು, ಜೂ. 16 ರಂದು ನಡೆಸುವಂತೆ ಅನುಮತಿ ನೀಡಿದ್ದಾರೆ ಎಂದು ಸಾಹಿತಿ ಸಾರಾ ಅಬೂಬಕ್ಕರ್ ಹೇಳಿದರು. ರಾಮೋತ್ಸವ ಬ್ಯಾನರ್ಗಳನ್ನು ನಿಷೇಧಿಸಲಾಗಿದೆಯೆಂದು ಜಿಲ್ಲಾಧಿಕಾರಿ ತಿಳಿಸಿದ್ದರೂ, ನಗರದ ವಿವಿಧೆಡೆ ಬ್ಯಾನರ್ಗಳು ಈಗಲೂ ಕಾಣ ಸಿಗುತ್ತಿದೆ. ಇದರ ಕುರಿತು 1077 ಕರೆ ಮಾಡಿ ತಿಳಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಇದನೆಲ್ಲಾ ಗಮನಿಸಿದರೆ ಚುನಾವಣೆ ಆಯೋಗ ಕೇಸರೀಕರಣ ಕಾರ್ಯ ನಡೆಸುತ್ತಿದೆ ಎಂಬ ಅನುಮಾನ ಬರುತ್ತಿದೆ ಎಂದು ವೇದಿಕೆ ಉಪಾಧ್ಯಕ್ಷ ಆಲಿ ಹಸನ್ ಹೇಳಿದ್ದಾರೆ. ವೇದಿಕೆಯ ಕಾರ್ಯದರ್ಶಿ ಇಸ್ಮತ್ ಫಜೀರ್, ಸದಸ್ಯ ಡೇವಿಡ್ ಡಿಸೋಜ ಮತ್ತಿತರರು ಇದ್ದರು.
ಪಿಎಫ್ಐ ಸಂಘಟನೆ ನಿಷೇಧಕ್ಕೆ ಆಗ್ರಹ
ಮಂಗಳೂರು: ಉಗ್ರಗಾಮಿಗಳ ಸಂಪರ್ಕ ಮತ್ತು ಮಾರಕಾಯುಧ ಹೊಂದಿರುವ ಪಿಎಫ್ಐ ಸಂಘಟನೆಯ ರಾಜ್ಯದ ಎಲ್ಲ ಕಚೇರಿ ಹಾಗೂ ಕಾರ್ಯಕರ್ತರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದು ಪರಿಷತ್, ಬಜರಂಗದಳ ಆಗ್ರಹಿಸಿದೆ. ಕಣ್ಣೂರು ನಾರತ್ನಲ್ಲಿ ಕಚ್ಚಾ ಬಾಂಬ್, ಅಪಾರ ಮಾರಕಾಯುಧಗಳನ್ನು ಹೊಂದಿರುವ 21 ಕಾರ್ಯಕರ್ತರ ಬಂಧನವಾಗಿದ್ದು, ಇವರು ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಕುರಿತು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಿದೆ ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಸಂಘಟನೆಯ ಕುರಿತು ಸರ್ಕಾರವನ್ನು ಎಚ್ಚರಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಇತ್ತೀಚೆಗೆ ಈ ಸಂಘಟನೆ ವಿದೇಶಿ ಭಯೋತ್ಪಾದನಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಭಯೋತ್ಪಾದನಾ ನಿಗ್ರಹ ದಳಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದೆ.
--