ಹೆತ್ತವರ ಮತದಾನಕ್ಕೆ ಕಳಿಸ್ತೀವಿ
ಮಂಗಳೂರು: ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ತತ್ವ ಸಿದ್ಧಾಂತಗಳ ಸಮಪರ್ಕ ಅನುಷ್ಠಾನಕ್ಕೆ ನಾಂದಿಯಾಗಬೇಕು ಎಂಬ ಭಾರತೀಯ ಚುನಾವಣಾ ಆಯೋಗದ ಆಶಯದಂತೆ ಸ್ವೀಪ್ ಕಾರ್ಯಕ್ರಮ ಪಣಂಬೂರು ಕಡಲ ಕಿನಾರೆಯಲ್ಲಿ ಭಾನುವಾರ ನಡೆಯಿತು.
ಜಿಲ್ಲಾಧಿಕಾರಿ ಹರ್ಷಗುಪ್ತ ಗಾಳಿಪಟ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಉತ್ತಮ ಸರ್ಕಾರ ರಚನೆಗೆ ಪ್ರಜಾಸತ್ತಾತ್ಮಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮಕ್ಕಳ ಮೂಲಕ ಅರಿವು ಮೂಡಿಸುವ ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಪೋಷಕರಿಗೆ ಅರಿವು ಮೂಡಿಸುವ ಪ್ರಯತ್ನ ನಡೆಯಿತು. 'ಮೇ 5ರಂದು ಮತದಾನ ಮಿಸ್ ಮಾಡಬೇಡಿ' ಎಂದು ಮಕ್ಕಳು ಘೋಷಣೆ ಕೂಗಿದರು. ಅಲ್ಲದೆ ತಮ್ಮ ಹೆತ್ತವರನ್ನು ಅಂದು ಮತದಾನಕ್ಕೆ ಕಳುಹಿಸುವ ಪ್ರತಿಜ್ಞೆ ಮಾಡಿದರು. ಈ ಸಂದರ್ಭ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್, ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಬೀಚ್ ಅಭಿವೃದ್ಧಿಯ ಯತೀಶ್ ಬೈಕಂಪಾಡಿ ಮತ್ತಿತರರಿದ್ದರು.
--