ಕಟ್ಟಿದರೂ ಮರು ಸಾಲ ಇಲ್ಲ!
ಮಂಗಳೂರು: ಬೆಳೆ ಸಾಲ ಪೂರ್ಣ ಪಾವತಿಸಿದರೆ 25 ಸಾವಿರ ಸಾಲ ಮನ್ನಾ. ಆದರೆ ಸಾಲ ಮರಪಾವತಿಸಿದರೂ ಸಹಕಾರಿ ಬ್ಯಾಂಕ್‌ಗಳು ಮರು ಸಾಲ ನೀಡುತ್ತಿಲ್ಲ. ಇನ್ನೊಂದೆಡೆ ರಾಜ್ಯ ಸರ್ಕಾರ ಈ ಬಾರಿ ಮಾಡಿರುವ ಸಾಲ ಮನ್ನಾದ ಮೊತ್ತ ಮತ್ತು ಬಡ್ಡಿ ರಿಯಾಯ್ತಿಯ ಮೊತ್ತವನ್ನು ಇನ್ನೂ ಸಹಕಾರಿ ಬ್ಯಾಂಕ್‌ಗಳಿಗೆ ನೀಡಿಲ್ಲ.
ಸರ್ಕಾರ ಹಣ ಪಾವತಿ ಮಾಡದಿರುವುದಕ್ಕೆ ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಅಲ್ಲದೆ, ಚುನಾವಣೆ ನೀತಿ ಸಂಹಿತೆಯೂ ಬ್ಯಾಂಕುಗಳಿಗೆ ವರದಾನವಾಗಿದ್ದು, ಈ ವಿಚಾರದಲ್ಲಿ ಯಾವ ನಾಯಕರೂ ಚಕಾರ ಎತ್ತುತ್ತಿಲ್ಲ. ಇದರಿಂದ ಅಗತ್ಯ ಸಾಲಕ್ಕಾಗಿ ರೈತರು ಪರದಾಡುವಂತಾಗಿದೆ.
ಬಡ್ಡಿ ಮನ್ನಾ ತಂದ ಫಜೀತಿ: ಸರ್ಕಾರವೇನೋ ರೈತರಿಗೆ ನೆರವಾಗಲೆಂದು ಬೆಳೆಸಾಲಕ್ಕೆ ಬಡ್ಡಿ ಮನ್ನಾ ಘೋಷಿಸಿದೆ. ಆದರೆ ಅದಕ್ಕೂ ಹಿಂದಿನ ವರ್ಷ ಸಾಲ ಮನ್ನಾ ಘೋಷಿಸಿದ್ದು, ಆ ಮೊತ್ತವನ್ನು ಸರ್ಕಾರವೇ ಬಾಕಿ ಇರಿಸಿರುವುದರಿಂದ ಸಹಕಾರಿ ಬ್ಯಾಂಕ್‌ಗಳು ಕೇಳಿದಷ್ಟು ಮರು ಸಾಲ ನೀಡುತ್ತಿಲ್ಲ.
2011- 12ನೇ ಸಾಲಿನಲ್ಲಿ ಅಲ್ಪಾವಧಿ ಬೆಳೆ ಸಾಲ ಪಡೆದ ರೈತರಿಗೆ ಸಾಲದ ಮೇಲೆ 25 ಸಾವಿರ ಮೊತ್ತವನ್ನು ಸರ್ಕಾರ ಮನ್ನಾ ಮಾಡಿತ್ತು. ಸರ್ಕಾರದ ಮಾತು ಕೇಳಿ ಬ್ಯಾಂಕಿಗೆ ತೆರಳಿದ ರೈತರು ತಮ್ಮ ಸಾಲವನ್ನು ಪೂರ್ಣ ತುಂಬಿ ರು. 25 ಸಾವಿರ ರಿಯಾಯ್ತಿ ಪಡೆದರು. ಮರು ಸಾಲಕ್ಕೆ ಅರ್ಜಿ ಗುಜರಾಯಿಸಿದಾಗ ತಮಗೆ ಹಿಂದಿದ್ದಷ್ಟು ಪೂರ್ತಿ ಸಾಲ ಸಿಗುತ್ತಿಲ್ಲ ಎಂಬುದು ಅರಿವಿಗೆ ಬಂತು.
ಈಗಾಗಲೇ ಮನ್ನಾ ಮಾಡಿದ ಮೊತ್ತ ಇನ್ನೂ ಸರ್ಕಾರ ಬ್ಯಾಂಕುಗಳಿಗೆ ನೀಡಿಲ್ಲ. ಹಾಗಾಗಿ ಸರ್ಕಾರ ಹಣ ನೀಡಿದ ಬಳಿಕವಷ್ಟೇ ಸಾಲ ನೀಡಲಾಗುವುದು ಎನ್ನುತ್ತಿದೆ ಸಹಕಾರಿ ಬ್ಯಾಂಕುಗಳು. ಒಂದೆಡೆ ಸಾಲ ಮನ್ನಾ ಪ್ರಯೋಜನ, ಇನ್ನೊಂದೆಡೆ ಪೂರ್ಣ ಸಾಲ ಮಂಜೂರು ಮಾಡದೆ ರೈತರನ್ನು ಯಾಮಾರಿಸುತ್ತಿರುವ ಬ್ಯಾಂಕ್‌ಗಳು.
ಬ್ಯಾಂಕ್‌ಗಳ ತಗಾದೆ ಏನು?: 2010-11ನೇ ಸಾಲಿನಲ್ಲಿ ಅಲ್ಪಾವಧಿ ಬೆಳೆ ಸಾಲದಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ 87 ಸಾವಿರ ರೈತರಿಗೆ ರು. 10 ಕೋಟಿ ಸಾಲ ನೀಡಿದೆ. ಇದರಲ್ಲಿ ತಲಾ ರು. 25 ಸಾವಿರ ಮನ್ನಾ ಆಗಿದ್ದು, ಮನ್ನಾ ಮೊತ್ತವನ್ನು ಸರ್ಕಾರ ಇದುವರೆಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ನೀಡಿಲ್ಲ. ಡಿಸಿಸಿ ಬ್ಯಾಂಕ್ ಹಾಗೂ ತಾಲೂಕಿನಲ್ಲಿರುವ ಸಹಕಾರಿ ಸಂಘಗಳು ತಮ್ಮದೇ ಬಂಡವಾಳದಿಂದ ಸಾಲ ನೀಡಿದ್ದೇ ವಿನಃ ಸರ್ಕಾರದ ಹಣದಿಂದಲ್ಲ. ಡಿಸಿಸಿ ಬ್ಯಾಂಕ್ ಅಪೆಕ್ಸ್ ಬ್ಯಾಂಕ್‌ಗೆ ತನ್ನ ಬಂಡವಾಳದಿಂದಲೂ ಪಾವತಿಸಿದೆ.
2011-12ನೇ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ 93 ಸಾವಿರ ರೈತರಿಗೆ 48 ಕೋಟಿ ಸಾಲ ನೀಡಿದ್ದು, ಇಲ್ಲಿಯೂ ರು. 25 ಸಾವಿರ ಸಾಲ ಮನ್ನಾ ಮೊತ್ತ ಕಳೆದರೂ ಆ ಮೊತ್ತವನ್ನು ಸರ್ಕಾರ ಬ್ಯಾಂಕ್‌ಗಳಿಗೆ ಇದುವರೆಗೂ ಬಿಡುಗಡೆ ಮಾಡಿಲ್ಲ. ಈಗ ಸಹಕಾರಿ ಬ್ಯಾಂಕ್‌ಗಳು 25 ಸಾವಿರ ಮನ್ನಾ ಮಾಡಿದರೂ ಸಾಲಗಾರ ಸದಸ್ಯರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಮನ್ನಾ ಮೊತ್ತ ಪಾವತಿಯಾದ ಬಳಿಕವೇ ಸದಸ್ಯರಿಗೆ ಪೂರ್ತಿ ಸಾಲ ನೀಡಲು ಸಾಧ್ಯ ಎನ್ನುವುದು ಬ್ಯಾಂಕ್‌ಗಳ ವಾದ.
2012-13ನೇ ಸಾಲಿನ ರೈತರ ಬೆಳೆ ಸಾಲದ ಮೇಲಿನ ಬಡ್ಡಿ ಎಷ್ಟು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ, ಸರ್ಕಾರ ಹೇಳಿದ್ದು 1 ಲಕ್ಷದವರೆಗೆ ಸೊನ್ನೆ ಬಡ್ಡಿಯಿಂದ ಶೇ.1ರವರೆಗೆ ಇದೆ. ಇದು ಬಾಯಿ ಮಾತಿನಲ್ಲೇ ಉಳಿದಿದೆ. ಯಾಕೆಂದರೆ ಎಷ್ಟು ಬಡ್ಡಿ ದರ ವಿಧಿಸಬೇಕು ಎಂಬ ಬಗ್ಗೆ ಸರ್ಕಾರ ಈವರೆಗೆ ಯಾವುದೇ ಮಾರ್ಗಸೂಚಿಯನ್ನು ಸಹಕಾರಿ ಬ್ಯಾಂಕ್‌ಗಳಿಗೆ ರವಾನಿಸಿಲ್ಲ ಎನ್ನುತ್ತಾರೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್.
ಬಡ್ಡಿದರ ನಿಗದಿಯಾಗದ ಹಿನ್ನೆಲೆಯಲ್ಲಿ ಸಾಲ ಮನ್ನಾ ಮಾಡಿದರೂ ಸರ್ಕಾರಕ್ಕೆ ಲೆಕ್ಕ ಕೊಡುವಾಗ ಯಾವ ಬಡ್ಡಿದರ ಕಾಣಿಸಬೇಕು ಎಂಬ ಸ್ಪಷ್ಟತೆ ಇಲ್ಲ. ಇದರಿಂದ ರೈತರಿಗೆ ಮರು ಸಾಲ ನೀಡಲು ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಸಹಕಾರಿ ಸಂಘಗಳ ಉಪನಿಬಂಧಕರ ಮೂಲಕ ಬರೆದುಕೊಂಡರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅವರು.
ಬರೀ ಬೊಗಳೆ
ರಾಜ್ಯ ಸರ್ಕಾರ ಸಾಲ ಮನ್ನಾ ಹೆಸರಿನಲ್ಲಿ ರೈತರಿಗೆ ಬೊಗಳೆ ಬಿಟ್ಟದ್ದಲ್ಲದೆ ಮತ್ತೇನಲ್ಲ. ಈಗ ನೀತಿ ಸಂಹಿತೆ ಇರುವುದರಿಂದ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಮಾತನಾಡುತ್ತಿಲ್ಲ. ಈ ಹಿಂದೆ ಬಡ್ಡಿ ಪಾವತಿಸಿ ಹೊಸ ಸಾಲ ಮಾಡುವ ಅವಕಾಶವಿತ್ತು. ಈಗ ಸಾಲ ಮನ್ನಾದಿಂದಾಗಿ ಪೂರ್ಣ ಸಾಲ ಪಾವತಿಸಿದರೂ ಮರು, ಅಷ್ಟೇ ಪ್ರಮಾಣದ ಸಾಲ ಸಿಗುತ್ತಿಲ್ಲ. ಇದರ ವಿರುದ್ಧ ಹೋರಾಟ ನಡೆಸಲಾಗುವುದೆನ್ನುತ್ತಾರೆ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಪೂಣಚ.
- ಆತ್ಮಭೂಷಣ್