'ಕಳೆದ ಬಾರಿಯ ಸಿಎಂ ಅಭ್ಯರ್ಥಿ ಈಗ ಯಾವ ಪಕ್ಷದಲ್ಲಿದ್ದಾರೆ'?
ಸುಳ್ಯ: ಬಿಜೆಪಿಯವರು ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಕಳೆದ ಬಾರಿ ಬಿಜೆಪಿ ಘೋಷಣೆ ಮಾಡಿದ ಮುಖ್ಯಮಂತ್ರಿ ಅಭ್ಯರ್ಥಿ ಈಗ ಯಾವ ಪಕ್ಷದಲ್ಲಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಚುನಾವಣಾ ಸಮಿತಿಯ ಜಿಲ್ಲಾ ಉಸ್ತುವಾರಿ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸರ್ಕಾರದ ಸಾಧನೆಯನ್ನು ಬಿಜೆಪಿ, ಕೆಜೆಪಿಯವರು ತಾವು ಮಾಡಿದ್ದೆಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾದರೆ ಕೆಲಸ ಮಾಡಿದ್ದು ಯಾರು ಎಂದೂ ಪ್ರಶ್ನಿಸಿದರು. ಬಿಜೆಪಿಗೆ ಹಲವೆಡೆ ಕಾರ್ಯಕರ್ತರೇ ಇಲ್ಲದ, ಮತ್ತೆ ಕೆಲವೆಡೆ ಬಿಜೆಪಿಯವರು ಮನೆಗೆ ಹೋದಾಗ ಬಾಗಿಲು ತೆರೆಯದ ಸ್ಥಿತಿ ಇದೆ ಎಂದು ಐವನ್ ಡಿಸೋಜ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಕಾಂಗ್ರೆಸ್ ನಾಯಕರಾದ ಎಸ್.ಸಂಶುದ್ದೀನ್, ಶ್ರೀರಾಂ ಪಾಟಾಜೆ, ಟಿ.ಎಂ. ಶಹೀದ್, ಆಶಿಕ್, ಝುಬೈರ್, ಪುರುಷೋತ್ತಮ ಬಂಗಾರಕೋಡಿ ಮೊದಲಾದವರು ಇದ್ದರು.