ತಿಂಡಿ ನೀಡದೆ ತರಬೇತಿ: ಶಿಕ್ಷಕರ ಪ್ರತಿಭಟನೆ
ಮಂಗಳೂರು: ಚುನಾವಣೆ ತರಬೇತಿಗೆ ಬಂದ ಶಿಕ್ಷಕರಿಗೆ ಬೆಳಗ್ಗೆ ತಿಂಡಿ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದರು. ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸಬೇಕಿದ್ದ ಶಿಕ್ಷಕರಿಗೆ ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಸುಳ್ಯ, ಪುತ್ತೂರಿನ ದೂರದೂರುಗಳಿಂದ ಬೆಳಗ್ಗೆ 9 ಗಂಟೆಗೆ ಆಗಮಿಸಿದ್ದರು. ಮಂಗಳೂರಿಗೆ 9 ಗಂಟೆಗೆ ತಲುಪಬೇಕಾದರೆ ಅಲ್ಲಿಂದ ಬೆಳಗ್ಗಿನ ಜಾವ 6.30ರಿಂದ ಹೊರಡಬೇಕಾಗುತ್ತದೆ. ಮಧ್ಯೆ ತಿಂಡಿ ಮಾಡೋಣ ಎಂದು ಹೇಳಿದರೆ ಮಂಗಳೂರಲ್ಲಿಯೇ ವ್ಯವಸ್ಥೆ ಇದೆ ಎಂಬ ಭರವಸೆ ಬಂದಿತ್ತು. ಆದರೆ ಇಲ್ಲಿ ಬಿಸ್ಕತ್ ಮತ್ತು ಚಹಾ ನೀಡಿದಾಗ ಸಿಟ್ಟಿಗೆದ್ದ ಶಿಕ್ಷಕರು ಪ್ರತಿಭಟನೆ ಶುರು ಮಾಡಿದರು. ಬೆಳಗ್ಗೆ 9.15ರಿಂದ 10.45ರವರೆಗೆ ಪ್ರತಿಭಟನೆ ನಡೆಯಿತು. ಚುನಾವಣೆ ಅಧಿಕಾರಿಯಾಗಿದ್ದ ತಹಸೀಲ್ದಾರ್ ಅವರಿಂದ ಮಧ್ಯಾಹ್ನ ಊಟ ಬೇಗನೆ ನೀಡುವ ಭರವಸೆ ಬಂತು. ಅಷ್ಟರಲ್ಲಿ ಕೆಲವರು ಪಕ್ಕದ ಹೊಟೇಲ್ಗಳಿಗೆ ಹೋಗಿ ಬಂದರು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಮಧ್ಯಾಹ್ನ ಊಟ ನೀಡಿದರೂ ಅಕ್ಕಿ ಬೆಂದಿರಲಿಲ್ಲ ಎಂದು ಹಲವು ಮಂದಿ ದೂರಿದ್ದಾರೆ.
ಸ್ಥಳ ಬದಲಾವಣೆ: ಎಲ್ಲರೂ ಕುದ್ರೋಳಿ ನಾರಾಯಣಗುರು ಕಾಲೇಜಲ್ಲಿ ತರಬೇತಿಗೆ ಹಾಜರಾಗಬೇಕು ಎಂದು ಆದೇಶ ಮಾಡಿದ್ದರು. ಅಲ್ಲಿಗೆ ಹೋದವರಿಗೆ ಸ್ಥಳಬದಲಾವಣೆ ಮಾಡಲಾಗಿದೆ. ಗೋಕರ್ಣನಾಥೇಶ್ವರ ಕಾಲೇಜಿಗೆ ಹೋಗಿ ಎಂಬ ಸೂಚನೆ ಬಂತು. ಎಲ್ಲ ಶಿಕ್ಷಕರ ಮೊಬೈಲ್ ನಂಬರ್ ಪಡೆದಿದ್ದರೂ ಸ್ಥಳಬದಲಾವಣೆ ಬಗ್ಗೆ ಮುಂಚಿತವಾಗಿ ತಿಳಿಸಿರಲಿಲ್ಲ. ಮಂಗಳೂರಿನ ಉಳಿದ ಕ್ಷೇತ್ರಗಳ ಚುನಾವಣೆ ತರಬೇತಿಯಲ್ಲಿ ಪಾಲ್ಗೊಂಡಿದ್ದವರಿಗೆ ಬೆಳಗ್ಗೆ ಭರ್ಜರಿ ತಿಂಡಿ, ಮಧ್ಯಾಹ್ನ ಊಟ ನೀಡಲಾಗಿದೆ.