ಮತಗಟ್ಟೆ ಸಿಬ್ಬಂದಿಗೆ ಬಿಸಿಯೂಟ!
ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಸೂಕ್ತ ಊಟೋಪಹಾರ ಇಲ್ಲದೆ ಪಡಿಪಾಟಿಲು ಪಡುವುದು ಸಾಮಾನ್ಯ. ಈ ಕೊರತೆ ಹೋಗಲಾಡಿಸಲು ದ.ಕ.ಜಿಲ್ಲೆಯಲ್ಲಿ ಈ ಬಾರಿ ಅನಿವಾರ್ಯತೆ ಇರುವ ಪ್ರದೇಶಗಳ ಮತಗಟ್ಟೆಗಳಲ್ಲಿ ಮತದಾನ ಸಿಬ್ಬಂದಿಗಳಿಗೆ ಶಾಲೆಯಿಂದಲೇ ಬಿಸಿಯೂಟ ನೀಡುವ ಚಿಂತನೆ ಮಾಡಲಾಗಿದೆ.
ಮತದಾನ ನಡೆಯುವುದು ಮೇ 5ರಂದು ಒಂದು ದಿನವಾದರೂ ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಊಟೋಪಹಾರಕ್ಕೆ ಸರಿಯಾದ ವ್ಯವಸ್ಥೆ ಇರುವುದಿಲ್ಲ. ಆಹಾರ ವ್ಯವಸ್ಥೆಯ ಜವಾಬ್ದಾರಿ ರೂಟ್ ಆಫೀಸರ್ಗೆ. ಮತಗಟ್ಟೆ ಬಳಿ ಹೊಟೇಲ್ ಇಲ್ಲದಿದ್ದರೆ ಹೊರಗೆ ಮನೆಗಳಿಂದ ತರಲು ಆ ಮನೆಗಳ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವುದು ಅಡ್ಡಿಯಾಗುತ್ತದೆ. ಹಾಗಾಗಿ ಅರೆಹೊಟ್ಟೆಯಲ್ಲಿ ಬೆಳಗ್ಗಿನಿಂದ ರಾತ್ರಿ ವರೆಗೆ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕಾಗುತ್ತದೆ. ಸಸ್ಯಾಹಾರಿಗಳಾದರೆ ಸರಿಯಾದ ಆಹಾರ ಸಿಗದಿದ್ದರೆ ಉಪವಾಸವೇ ಇರುವ ಪರಿಸ್ಥಿತಿ. ಇದನ್ನು ತಪ್ಪಿಸಲು ಚುನಾವಣಾ ಹಿನ್ನಲೆಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಬಿಸಿಯೂಟ ನೀಡಲು ಕ್ರಮಕೈಗೊಳ್ಳಲು ಚಿಂತಿಸಲಾಗಿದೆ.
ಮೂಲಸೌಕರ್ಯಕ್ಕೆ ಒತ್ತು: ಹೆಚ್ಚಿನ ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್, ಶೌಚಾಲಯ ವ್ಯವಸ್ಥೆ ಸಮರ್ಪಕ ಇರುವುದಿಲ್ಲ ಎನ್ನುವ ಆರೋಪ ಸಿಬ್ಬಂದಿಗಳದ್ದು. ಈ ಬಾರಿ ಎರಡೆರಡು ಬಾರಿ ಸೆಕ್ಟರ್ ಅಧಿಕಾರಿಗಳು ಆಯಾ ಮತಗಟ್ಟೆಗೆ ಭೇಟಿ ನೀಡಿ ಫೋಟೋ ತೆಗೆದು ಅಲ್ಲಿನ ವ್ಯವಸ್ಥೆಯ ಸಮಗ್ರ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗೆ ನೀಡಿದ್ದಾರೆ. ಅಲ್ಲದೆ ಅವಶ್ಯಕ ವ್ಯವಸ್ಥೆ ಬಗ್ಗೆ ನಿಗಾ ಇರಿಸಿದ್ದಾರೆ. ಹಾಗಾಗಿ ಈ ಸಲ ಮತಗಟ್ಟೆಯಲ್ಲಿ ಮೂಲಸೌಕರ್ಯಕ್ಕೆ ತೊಂದರೆಯಾಗದು ಎನ್ನುತ್ತಾರೆ ಜಿಲ್ಲಾಧಿಕಾರಿ ಹರ್ಷಗುಪ್ತ.
ಇಷ್ಟಾದರೂ ಮತಗಟ್ಟೆಗಳಲ್ಲಿರುವ ಮಹಿಳಾ ಸಿಬ್ಬಂದಿಗಳು ಸ್ನಾನಕ್ಕೆ ಈ ಬಾರಿಯೂ ತಮ್ಮದೇ ವ್ಯವಸ್ಥೆ ನೋಡಿಕೊಳ್ಳಬೇಕಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳು ಮತದಾನ ಮುಕ್ತಾಯವರೆಗೆ ಮತಗಟ್ಟೆ ಬಿಡುವಂತಿಲ್ಲ. ಹಾಗಾಗಿ ಹೊರಗಡೆ ತೆರಳುವಂತೆಯೂ ಇಲ್ಲ.
ಒಂದೇ ಕೊಠಡಿ ಯಾಕೆ?: ಮತಗಟ್ಟೆಗೆ ಚುನಾವಣಾ ಮುನ್ನಾ ದಿನ ಆಗಮಿಸುವ ಸಿಬ್ಬಂದಿಗಳು ಒಂದೇ ಕೊಠಡಿಯಲ್ಲಿ ವಾಸ್ತವ್ಯ ಮಾಡಬೇಕಾದ ಪರಿಸ್ಥಿತಿ ಇದೆ. ಯಾಕೆಂದರೆ ಮತದಾನ ನಡೆಯುವ ಕೊಠಡಿ ಹೊರತುಪಡಿಸಿ ಖಾಲಿ ಇದ್ದರೂ ಹೆಚ್ಚುವರಿ ಕೊಠಡಿಯನ್ನು ನೀಡುವುದಿಲ್ಲ. ಇದರಿಂದ ಮಹಿಳಾ ಸಿಬ್ಬಂದಿಗಳೂ ಇತರೆ ಸಿಬ್ಬಂದಿಗಳ ಜತೆ ಒಂದೇ ಕೊಠಡಿಯಲ್ಲಿ ಇರಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗುತ್ತಿದೆ. ಈ ವಿಚಾರದಲ್ಲಿ ಚುನಾವಣಾಧಿಕಾರಿಗಳು ಗಮನಹರಿಸಬೇಕು ಎನ್ನುತ್ತಾರೆ ನಿಯೋಜಿತ ಮಹಿಳಾ ಅಧಿಕಾರಿಯೊಬ್ಬರು.
ಮಸ್ಟರಿಂಗ್, ಡಿಮಸ್ಟರಿಂಗ್ ನ್ಯೂನತೆ: ಮಸ್ಟರಿಂಗ್ ವೇಳೆ ಬೆಳಗ್ಗೆ 6.30ಕ್ಕೆ ಮಸ್ಟರಿಂಗ್ ಕೇಂದ್ರ ತಲಪುವಂತೆ ಸೂಚಿಸಲಾಗುತ್ತಿದೆ. ದೂರದಿಂದ ಆಗಮಿಸುವ ಸಿಬ್ಬಂದಿಗೆ ತೊಂದರೆ. ಮಸ್ಟರಿಂಗ್ ಮುಗಿಸಿ ಮತದಾನ ಕೇಂದ್ರಕ್ಕೆ ಹೊರಡುವಾಗ ಮಧ್ಯಾಹ್ನವಾಗುತ್ತದೆ. ಮಸ್ಟರಿಂಗ್ ಕೇಂದ್ರ ತಲುಪುವ ಸಮಯವನ್ನು ಕನಿಷ್ಠ 8 ಗಂಟೆಗೆ ನಿಗದಿಪಡಿಸಬೇಕು ಎಂಬುದು ಸಿಬ್ಬಂದಿ ಬೇಡಿಕೆ. ಅಲ್ಲದೆ ಡಿಮಸ್ಟರಿಂಗ್ ವೇಳೆ ರಾತ್ರಿ 8 ಗಂಟೆಗೆ ಮಹಿಳಾ ಸಿಬ್ಬಂದಿಗಳನ್ನು ಕಳುಹಿಸುತ್ತಾರೆ. ಪುರುಷರು ತಡರಾತ್ರಿವರೆಗೂ ಇರಬೇಕು. ಮತಗಟ್ಟೆಗೆ ಸಾಗಿಸಿದ ದಾಖಲೆಗಳನ್ನು ಸೀಲ್ ಮಾಡುವಂತೆ ಸೂಚಿಸಿ ಬಳಿಕ ಡಿಮಸ್ಟರಿಂಗ್ನಲ್ಲಿ ಸೀಲ್ ತೆಗೆದು ಲೆಕ್ಕಾಚಾರ ಮಾಡುವಂತೆ ಹೇಳುತ್ತಾರೆ. ಈ ವಿಚಾರದಲ್ಲಿ ಸುಧಾರಣೆಯಾಗಬೇಕಾಗಿದೆ ಎನ್ನುವುದು ಹಿರಿಯ ಸಿಬ್ಬಂದಿಯೊಬ್ಬರ ಅನಿಸಿಕೆ.
- ಆತ್ಮಭೂಷಣ್