ಮೇ 2ಕ್ಕೆ ಮೋದಿ ಮಂಗಳೂರಿಗೆ
ಮಂಗಳೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಚುನಾವಣೆ ಪ್ರಚಾರ ಕಾರ್ಯಕ್ಕೆ ಮಂಗಳೂರಿಗೆ ಮೇ 2ರಂದು ಆಗಮಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ನೆಹರು ಮೈದಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ, ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ನರೇಂದ್ರ ಮೋದಿಯನ್ನು ತಾಕತ್ತಿದ್ದರೆ ಪ್ರಚಾರಕ್ಕೆ ಕರೆಯಿರಿ ಎಂದು ಕೆಲವರ ಪಂಥಾಹ್ವಾನ ಮಾಡಿದ್ದರು. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಬೆಂಗಳೂರಿಗೆ ಕರೆತಂದೆವು. ಇದೀಗ ಮಂಗಳೂರು ಮತ್ತು ಬೆಂಗಳೂರಿಗೆ ಮೋದಿ ಬರುವಂತೆ ಮಾಡಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜನರು ಮೋದಿಯನ್ನು ಕೇಳುತ್ತಿದ್ದರು, ಮೋದಿಯೂ ಸ್ವ ಇಚ್ಛೆಯಿಂದ ಇಲ್ಲಿಗೆ ಆಗಮಿಸುತ್ತಿದ್ದಾರೆ. ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಥಮ ಸುತ್ತಿನ ಪ್ರಚಾರ ಕಾರ್ಯ ನಡೆದಿದ್ದು, ಈ ಬಾರಿಯೂ ಬಿಜೆಪಿ ತನ್ನ ಪ್ರಾಬಲ್ಯ ಸಾಧಿಸಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಶ್ರೀಕರ ಪ್ರಭು, ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ನಿತಿನ್ ಕುಮಾರ್, ರಾಜಗೋಪಾಲ ರೈ ಇದ್ದರು.