ರು. 63 ಲಕ್ಷ ಮುಟ್ಟುಗೋಲು
ಮಂಗಳೂರು: ಚುನಾವಣಾ ಕಾರ್ಯಕ್ಕೆ ಬಳಸಲಾಗುತ್ತಿದೆ ಎಂಬ ಆರೋಪದಲ್ಲಿ ಅತ್ತಾವರ ಗೋಲ್ಡನ್ ಕ್ಯಾಪಿಟಲ್ ಅಪಾರ್ಟ್‌ಮೆಂಟ್‌ನ ಮನೆಯೊಂದಕ್ಕೆ ದಾಳಿ ನಡೆಸಿದ ಜಿಲ್ಲಾಧಿಕಾರಿ ರು. 63 ಲಕ್ಷ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ರಜಾಕ್ ಎಂಬವರ ಮನೆಯಲ್ಲಿ ಚುನಾವಣಾ ಸಮರಕ್ಕೆ ಬಳಸಲು ಹಣ ಇರಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಸೋಮವಾರ ತಡರಾತ್ರಿ 10.30 ರ ನಂತರ ಜಿಲ್ಲಾಧಿಕಾರಿ ಹರ್ಷಗುಪ್ತ ಮತ್ತು ಚುನಾವಣಾಧಿಕಾರಿಗಳ ತಂಡ ದಾಳಿ ನಡೆಸಿದೆ.
ರಜಾಕ್ ಅವರ ಮನೆಯೊಳಗೆ ಬೆಡ್ ಅಡಿಯಲ್ಲಿ, ಕೋಣೆಯಲ್ಲಿ ರು. 100, 500, 1000 ಮೌಲ್ಯದ ನೋಟುಗಳನ್ನು ರಾಶಿ ರಾಶಿಯಾಗಿ ಅಡಗಿರಿಸಲಾಗಿತ್ತು.
ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಇದು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೈದೀನ್ ಬಾವ ಅವರಿಗೆ ಸೇರಿದೆ ಎನ್ನಲಾಗಿದೆ. ರಜಾಕ್ ಅವರು ಮೈದೀನ್ ಬಾವ ಅವರ ಹಿಂಬಾಲಕರಾಗಿದ್ದು, ಚುನಾವಣಾ ಸಮರದಲ್ಲಿ ಬಳಕೆ ಮಾಡಲು ರು. 2 ಕೋಟಿ ಇರಿಸಿದ್ದಾರೆ ಎಂಬ ದೂರು ಬಂದಿತ್ತು.
ಸೂಕ್ತ ದಾಖಲೆ ಪತ್ರಗಳಿಲ್ಲದ ಕಾರಣ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಯು ಉಳ್ಳಾಲದಲ್ಲಿ ತನಗೆ ಫ್ಯಾಕ್ಟರಿ ಇದೆ ಎಂದು ಹೇಳಿಕೊಂಡಿದ್ದು, ಸ್ಥಳಕ್ಕೆ ಎಸಿಪಿ ಜಗನ್ನಾಥ ಪಿ.ಆರ್., ಚುನಾವಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.